Spread the love

ಹಿಜಾಬ್‌ ವಿಚಾರದ ಕಾರ್ಯಕ್ರಮವನ್ನು ನಿರೂಪಣೆ ಮಾಡುತ್ತಿರುವಾಗ ‘ಭಾರತವು ಹಿಂದೂ ಧರ್ಮದ ಆಧಾರಲ್ಲಿ ನಿರ್ಮಾಣವಾಗಿದೆ’ ಎಂದು ಹೇಳಿದ್ದ ಪಬ್ಲಿಕ್ ಟಿವಿಯ ಮುಖ್ಯಸ್ಥ ಎಚ್.ಆರ್. ರಂಗನಾಥ್ ಹಾಗೂ ನಿರೂಪಕ ಅರುಣ್ ಬಡಿಗೇರ್ ವಿರುದ್ಧ ಜಾಮೀನು ರಹಿತ ಪ್ರಕರಣ ದಾಖಲಿಸುವಂತೆ ನ್ಯಾಯಾಲಯವು ಪೊಲೀಸರಿಗೆ ಸೂಚಿಸಿದೆ.


ಪಬ್ಲಿಕ್ ಟಿವಿಯ ಫೆಬ್ರವರಿ 3ರಂದು ‘ವಿದ್ಯಾದೇಗುಲದಲ್ಲಿ ಧರ್ಮ ಯುದ್ಧ, ಬಿಗ್ ಬುಲೆಟಿನ್’ ಎಂಬ ಶಿರ್ಷಿಕೆಯ ಕಾರ್ಯಕ್ರಮದಲ್ಲಿ ಎಚ್.ಆರ್. ರಂಗನಾಥ್ ಹಾಗೂ ಅರುಣ್ ಬಡಿಗೇರ್ ಅವರು ಮತನಾಡುತ್ತಾ, ‘ಇದು ಭಾರತ. ಭಾರತ ಸೃಷ್ಟಿಯಾಗಿದ್ದು ಹಿಂದೂ ರಾಷ್ಟ್ರದ ಆಧಾರದಲ್ಲಿ’ ಎಂದು ಹೇಳಿಕೆ ನೀಡಿ ವಿವಾದ ಸೃಷ್ಟಿಸಿದ್ದರು.

ಈ ಹೇಳಿಕೆಯನ್ನು ವಿರೋಧಿಸಿ ಹಲವಾರು ಜನರು ಆಕ್ರೋಶ ವ್ಯಕ್ತಪಡಿಸಿದ್ದರು. ವಿವಾದಾತ್ಮಕ ಹೇಳಿಕೆ ಮೂಲಕ ನಿರೂಪಕರಿಬ್ಬರು ಮುಸ್ಲಿಮರ ಭಾವನೆಗಳಿಗೆ ಧಕ್ಕೆ ಮಾಡಿದ್ದು, ದೇಶದ ಸಮಗ್ರತೆಯ ವಿರುದ್ಧ ಪೂರ್ವಗ್ರಹ ಪೀಡಿತ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಲಾಗಿತ್ತು.

ಈ ವಿವಾದಾತ್ಮಕ ಹೇಳಿಕೆಯ ವಿರುದ್ಧ ಬಂದೇನವಾಜ್ ಗೋಗಿ ಅವರು ಶಹಾಪುರದ ಹೆಚ್ಚುವರಿ ನ್ಯಾಯಿಕ ದಂಡಾಧಿಕಾರಿಗಳ ನ್ಯಾಯಾಲಯದಲ್ಲಿ ಖಾಸಗಿ ದೂರು ಸಲ್ಲಿಸಿದ್ದರು.

ಅವರ ದೂರನ್ನು ಪರಿಗಣಿಸಿದ ನ್ಯಾಯಾಲಯವು ಪಬ್ಲಿಕ್ ಟಿವಿಯ ಎಚ್‌.ಆರ್‌. ರಂಗನಾಥ್ ಮತ್ತು ನಿರೂಪಕ ಅರುಣ್ ಬಡಿಗೇರ್ ವಿರುದ್ಧ ಗೋಗಿ ಪೊಲೀಸ್ ಠಾಣೆಯಲ್ಲಿ ಕಲಂ 153(ಬಿ), 505(1)(ಬಿ)(ಸಿ) ಮತ್ತು 505(2) ಐಪಿಸಿ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲು ನಿರ್ದೇಶನ ನೀಡಿದೆ.


Spread the love