ಬೆಂಗಳೂರು: ರಾಜಧಾನಿ ಬೆಂಗಳೂರು ನಗರದಲ್ಲಿ 32,011 ರಸ್ತೆ ಗುಂಡಿಗಳನ್ನು ಪತ್ತೆ ಹಚ್ಚಲಾಗಿದ್ದು, ಈ ಪೈಕಿ ಶೇ. 92.21ರಷ್ಟು ದುರಸ್ತಿಪಡಿಸಲಾಗಿದೆ ಎಂದು ಬಿಬಿಎಂಪಿ ತಿಳಿಸಿದೆ. ಗುಂಡಿಯೋ ಅಥವಾ ಗುಂಡಿಗಳಲ್ಲಿ ರಸ್ತೆಯೋ ಎಂಬ ದುಸ್ಥಿತಿ ಬೆಂಗಳೂರಿನ ರಸ್ತೆಗಳದ್ದಾಗಿದೆ. ಕೋಟ್ಯಂತರ ರೂ. ಖರ್ಚು ಮಾಡಿ ನಿರ್ಮಿಸಲಾಗಿರುವ ರಸ್ತೆಗಳು ಕಳಪೆ ಗುಣಮಟ್ಟದ್ದಾಗಿದ್ದು, ನಗರದಲ್ಲಿ 32,011 ರಸ್ತೆ ಗುಂಡಿಗಳನ್ನು ಪತ್ತೆ ಮಾಡಲಾಗಿದೆ. ಈ ಪೈಕಿ 29,517 ಗುಂಡಿಗಳನ್ನು ಮುಚ್ಚಲಾಗಿದೆ.
ಇನ್ನೂ 2,494 ರಸ್ತೆ ಗುಂಡಿಗಳು ಮುಚ್ಚಲು ಬಾಕಿ ಇರುವುದಾಗಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ತಿಳಿಸಿದೆ. ದಾಸರಹಳ್ಳಿ ವಲಯದಲ್ಲಿ ಅತಿಹೆಚ್ಚು ರಸ್ತೆ ಗುಂಡಿ ಅಂದರೆ 1,045 ಗುಂಡಿಗಳಿವೆ. ಪಶ್ಚಿಮದಲ್ಲಿ 292, ಬೊಮ್ಮನಹಳ್ಳಿ ವಲಯದಲ್ಲಿ 263, ಮುಖ್ಯರಸ್ತೆಗಳಲ್ಲಿ 367 ಹಾಗೂ ಆರ್ಆರ್ ನಗರದಲ್ಲಿ 203 ಸೇರಿದಂತೆ ಎಲ್ಲಾ ವಲಯಗಳಲ್ಲೂ 2,494 ಯಮ ಸ್ವರೂಪಿ ಗುಂಡಿಗಳು ಇನ್ನೂ ಮುಚ್ಚಲು ಬಾಕಿ ಇವೆ.