Spread the love

ನ್ಯೂಯಾರ್ಕ್: ನಾರ್ವೆ ದೇಶದ ಯುವರಾಣಿ ಮಾರ್ತಾ ಲೂಯಿಸ್ ಅಮೆರಿಕದ ಮಂತ್ರವಾದಿ ಹಾಗೂ ಲೇಖಕ, ಉದ್ಯಮಿ ಡ್ಯೂರೆಕ್ ವೆರೆಟ್ ಅವರನ್ನು ವರಿಸಲಿದ್ದಾರೆ. ಈ ಕಾರಣಕ್ಕೆ ತಾನು ರಾಜ ಮನೆತನವನ್ನು ತೊರೆದಿರುವುದಾಗಿ ಸ್ವತಃ 51 ವರ್ಷದ ಯುವರಾಣಿ ಮಾರ್ತಾ ಹೇಳಿಕೊಂಡಿದ್ದಾರೆ.

ನಾನು ಡ್ಯೂರೆಕ್ ಅವರ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದೇನೆ ಎಂದು ಮಾರ್ತಾ ಹೇಳಿದ್ದಾರೆ. ಡ್ಯೂರೆಕ್ ವೆರೆಟ್ ಒಬ್ಬ ಅಮೆರಿಕನ್ ಉದ್ಯಮಿ, ಪೃಕೃತಿ ಚಿಕಿತ್ಸಕ. ಅವರು ಮಂತ್ರವಾದಿ ಎಂದು ಖ್ಯಾತಿ ಗಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ನಾರ್ವೆ ಮಾಧ್ಯಮಗಳು ಡ್ಯೂರೆಕ್ ಅವರನ್ನು ‘ವಂಚಕ’ ಎಂದು ಕರೆದಿದ್ದವು.

ಮಾರ್ತಾ ಲೂಯಿಸ್ ಕೂಡ ಅತಿಮಾನುಷ ಶಕ್ತಿಗಳಲ್ಲಿ ನಂಬಿಕೆ ಹೊಂದಿದ್ದಾರೆ. ಈ ಬಗ್ಗೆ ಅವರು ನಾರ್ವೆಯಲ್ಲಿ ಜನರ ಗಮನ ಸೆಳೆಯಲು ಪ್ರಯತ್ನಿಸಿದ್ದರು. ಇದೀಗ ಅವರು ರಾಜಮನೆತದ ಕರ್ತವ್ಯಗಳಿಂದ ವಿಮುಕ್ತಿ ಘೋಷಿಸಿ, ತಾವು ಮಂತ್ರವಾದಿ ಡ್ಯೂರೆಕ್ ಅವರನ್ನು ವಿವಾಹವಾಗುತ್ತಿರುವುದಾಗಿ ಘೋಷಿಸಿದ್ದಾರೆ.

ಮಾರ್ತಾ ಲೂಯಿಸ್ ಅವರು ನಾರ್ವೆಯ ರಾಜ ಹರ್ಲಾಡ್ ಹಾಗೂ ರಾಣಿ ಸೋನಾಜ್ ಅವರ ಪುತ್ರಿಯಾಗಿದ್ದಾರೆ. ಡ್ಯೂರೆಕ್ ವೆರೆಟ್ ಹಾಲಿವುಡ್‌ನ ಆಧ್ಯಾತ್ಮಿಕ ಗುರು ಎಂದು ಕೂಡ ಹೆಸರು ಗಳಿಸಿದ್ದಾರೆ.

ಡ್ಯೂರೆಕ್ ವೆರೆಟ್ ಕೊರೊನಾ ಸಂದರ್ಭದಲ್ಲಿ ತಾಯತ ಕಟ್ಟಿಕೊಂಡರೇ ಕೊರೊನಾ ವೈರಸ್ ಬರುವುದಿಲ್ಲ ಎಂದು ಹೇಳಿ ಸುದ್ದಿಯಾಗಿದ್ದರು. ಇನ್ನು ಮಾರ್ತಾ ಅವರು, ತಾವು ಇನ್ನುಮುಂದೆ ಡ್ಯೂರೆಕ್ ಜೊತೆ ಸೇರಿ ಕ್ಯಾನ್ಸರ್ ಸೇರಿದಂತೆ ಇತರ ರೋಗಗಳಿಗೆ ಪರ್ಯಾಯ ಔಷಧ ಕಂಡುಹಿಡಿಯುವುದಾಗಿ ತಿಳಿಸಿದ್ದಾರೆ.


Spread the love