ಸ್ಯಾಂಡಲ್ ವುಡ್ ನ ಖ್ಯಾತ ನಿರ್ದೇಶಕ ಕೆ.ಆರ್.ಮುರಳಿಕೃಷ್ಣ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮುರಳಿಕೃಷ್ಣ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ.
ನಿರ್ಮಾಪಕರಾಗಿ, ನಿರ್ದೇಶಕರಾಗಿ ಮಾತ್ರವಲ್ಲ, ಅಡ್ವಕೇಟ್ ಆಗಿಯೂ ಕಾರ್ಯ ನಿರ್ವಹಿಸಿದ್ದ ಮುರಳಿಕೃಷ್ಣ ಅವರಿಗೆ ಬ್ರೇನ್ ಟ್ಯೂಮರ್ ಆಗಿತ್ತು. ಈ ಹಿನ್ನೆಲೆಯಲ್ಲಿ ಶಸ್ತ್ರಚಿಕಿತ್ಸೆ ನಡೆಸಲಾಗಿತ್ತು. ಶಸ್ತ್ರಚಿಕಿತ್ಸೆ ಬಳಿಕ ಅವರಿಗೆ ಹೃದಯಾಘಾತವಾಗಿತ್ತು. ಇದೀಗ ಚಿಕಿತ್ಸೆ ಫಲಕಾರಿಯಾಗದೇ ಮುರಳಿಕೃಷ್ಣ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ.
ಬೆಂಗಳೂರಿನ ಸಹಕಾರನಗರದಲ್ಲಿರುವ ನಿವಾಸದಲ್ಲಿ ಮುರಳಿಕೃಷ್ಣ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿದ್ದು, ಸಂಜೆ ಹೆಬ್ಬಳ ಚಿತಾಗಾರದಲ್ಲಿ ಅಂತ್ಯಸಂಸ್ಕಾರ ನೆರವೇರಲಿದೆ.
ಬಾಳನೌಕೆ, ಕರ್ಣನ ಸಂಪತ್ತು, ಹೃದಯ ಸಾಮ್ರಾಜ್ಯ, ಮರಳಿ ಗೂಡಿಗೆ, ಗರ ಸೇರಿದಂತೆ ಹಲವು ಜನಪ್ರಿಯ ಚಿತ್ರಗಳನ್ನು ಕೆ.ಆರ್.ಮುರಳಿಕೃಷ್ಣ ನಿರ್ದೇಶಿಸಿದರು. ಖ್ಯಾತ ನಿರ್ದೇಶಕನ ನಿಧನಕ್ಕೆ ಕನ್ನಡ ಚಿತ್ರರಂಗ ಕಂಬನಿ ಮಿಡಿದಿದೆ.