ಕೋಲಾರ: ಮುಂಬರುವ ವಿಧಾನಸಭಾ ಚುನಾವಣೆಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಕೋಲಾರದಿಂದ ಸ್ಪರ್ಧೆ ಮಾಡುವುದು ಬಹುತೇಕ ಖಚಿತವಾಗಿದ್ದು, ನಾಮಪತ್ರ ಸಲ್ಲಿಸಲು ಮತ್ತೆ ಕೋಲಾರಕ್ಕೆ ಬರುತ್ತೇನೆ ಎಂದು ಘೋಷಿಸುತ್ತಿದ್ದಂತೆ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಸಂಭ್ರಮ ಮುಗಿಲುಮುಟ್ಟಿದೆ. ಕೋಲಾರ ಕೈ ಕಾರ್ಯಕರ್ತರು ಮುಂದಿನ ಶಾಸಕ ಸಿದ್ದರಾಮಯ್ಯ, ಮುಂದಿನ ಸಿಎಂ ಸಿದ್ದರಾಮಯ್ಯ ಎಂದು ಘೋಷಣೆ ಕೂಗಿ ಸಂಭ್ರಮಿಸಿದ್ದಾರೆ. ಅಲ್ಲದೇ ಕೋಲಾರ ಕ್ಷೇತ್ರದಾದ್ಯಂತ ಸಂಚರಿಸಿರುವ ಸಿದ್ದರಾಮಯ್ಯ ಎಲ್ಲಾ ಮಹನೀಯರ ಪುತ್ಥಳಿಗಳಿಗೆ ಮಾಲಾರ್ಪಣೆ ಮಾಡಿದ್ದಾರೆ.
ಈ ವೇಳೆ ಕೋಲಾರ ಚರ್ಚ್ ಗೂ ಭೇಟಿ ನೀಡಿರುವ ಸಿದ್ದರಾಮಯ್ಯ ನೆರೆದ ಜನರನ್ನುದ್ದೇಶಿಸಿ ಮಾತನಾಡುತ್ತಾ, ನಾಮಪತ್ರ ಸಲ್ಲಿಕೆ ಮಾಡಲು ಮತ್ತೆ ಕೋಲಾರಕ್ಕೆ ಬರುತ್ತೇನೆ. 5 ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ ಉತ್ತಮ ಆಡಳಿತ ನಡೆಸಿದ್ದೇನೆ. ಯಾವುದೇ ಜಾತಿ, ಧರ್ಮಕ್ಕೆ ಸೀಮಿತವಾಗಿ ಆಡಳಿತ ನಡೆಸಿಲ್ಲ. ಎಲ್ಲಾ ಸಮುದಾಯಗಳ ಜನರನ್ನು ಒಗ್ಗಟ್ಟಾಗಿ ಕರೆದುಕೊಂಡು ಹೋಗುವ ನಿಟ್ಟಿನಲ್ಲಿ ಅಭಿವೃದ್ಧಿಪರ ಆಡಳಿತವನ್ನು ನೀಡಿದ್ದೇನೆ. ಕಾಂಗ್ರೆಸ್ ಎಲ್ಲಾ ಧರ್ಮದವರನ್ನು ಸಮಾನವಾಗಿ ಕಾಣುತ್ತದೆ ಎಂದು ಹೇಳಿದರು.