ತೆಲುಗಿನ ಸೂಪರ್ ಸ್ಟಾರ್ ಕೃಷ್ಣ ನಿನ್ನೆ ನಿಧನರಾಗಿದ್ದು ಅಂತ್ಯಕ್ರಿಯೆ ಇಂದು ಸಕಲ ಸರ್ಕಾರಿ ಗೌರವಗಳೊಂದಿಗೆ ನಡೆಯಲಿದೆ. ಪದ್ಮಾಲಯ ಸ್ಟುಡಿಯೋದಲ್ಲಿ ಅಭಿಮಾನಿಗಳಿಗಾಗಿ ಇಂದು ಮಧ್ಯಾಹ್ನ 12.30ರವರೆಗೂ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಬಳಿಕ ಪಾರ್ಥೀವ ಶರೀರವನ್ನು ಮಹಾಪ್ರಸ್ಥಾನಂಗೆ ಶಿಫ್ಟ್ ಮಾಡಲಾಗುವುದು ಎಂದು ಕುಟುಂಬದ ಸದಸ್ಯರು ತಿಳಿಸಿದ್ದಾರೆ.
ಮಂಗಳವಾರ ಸಂಜೆಯೇ ಸಾರ್ವಜನಿಕರಿಗೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಬೇಕಿತ್ತು. ಅದು ಸಾಧ್ಯವಾಗದೇ ಇರುವ ಕಾರಣಕ್ಕಾಗಿ ಇಂದು ಮಧ್ಯಾಹ್ನ 12.30ರವರೆಗೂ ವ್ಯವಸ್ಥೆ ಮಾಡಲಾಗಿದೆ.
ಸೂಪರ್ ಸ್ಟಾರ್ ಕೃಷ್ಣ ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ಗಣ್ಯರು ಕಂಬನಿ ಮಿಡಿದಿದ್ದಾರೆ. ಕೃಷ್ಣ ನಿಧನಕ್ಕೆ ಮೋದಿ ಟ್ವೀಟ್ ಮೂಲಕ ಸಂತಾಪ ಸೂಚಿಸಿದ್ದಾರೆ. ಕೃಷ್ಣ ಅವರ ವೃತ್ತಿ ಜೀವನದ ಸಾಧನೆಯನ್ನು ಕೊಂಡಾಡುತ್ತಲೇ, ಈ ಸಂದರ್ಭದಲ್ಲಿ ದುಃಖದಲ್ಲಿರುವ ಕೃಷ್ಣ ಅವರ ಕುಟುಂಬಕ್ಕೆ ಸಾಂತ್ವಾನ ಹೇಳಿದ್ದಾರೆ. ‘ಕೃಷ್ಣ ಲೆಜೆಂಡರಿ ನಟರಾಗಿದ್ದು, ತಮ್ಮ ನಟನೆ ಮೂಲಕ ಅಸಂಖ್ಯಾತ ಅಭಿಮಾನಿಗಳ ಹೃದಯದಲ್ಲಿ ಇದ್ದರು’ ಎಂದು ಟ್ವಿಟ್ ಮಾಡುವ ಮೂಲಕ ಮೋದಿ ಸಂತಾಪ ಸೂಚಿಸಿದ್ದರು.
ಸಿನಿಮಾ, ನಾಟಕಗಳಲ್ಲಿ ಮಾತ್ರವಲ್ಲ, ರಾಜಕಾರಣದಲ್ಲೂ ತಮ್ಮದೇ ಆದ ಛಾಪು ಮೂಡಿಸಿದವರು ಕೃಷ್ಣ. ಕಾಂಗ್ರೆಸ್ ಪಕ್ಷದೊಂದಿಗೆ ಗುರುತಿಸಿಕೊಂಡು ಲೋಕಸಭಾ ಸದಸ್ಯರಾಗಿಯೂ ಜನಪರ ಕೆಲಸಗಳನ್ನೂ ಕೃಷ್ಣ ಮಾಡಿದ್ದಾರೆ. ಕೃಷ್ಣ ಸೇವೆಗೆ ಪದ್ಮಭೂಷಣ ಪ್ರಶಸ್ತಿ ಸೇರಿದಂತೆ ಹಲವು ಪುರಸ್ಕಾರಗಳು ಸಂದಿವೆ.