ಅಮೆರಿಕ: ಅಮೆರಿಕದಲ್ಲಿ ಪಿಸ್ತೂಲು ಸಂಸ್ಕೃತಿಯ ಮೇಲೆ ನಿರ್ಬಂಧ ಹೇರಿದಾಗ್ಯೂ, ಮತ್ತೆ ಗುಂಡಿನ ದಾಳಿ ನಡೆದಿದೆ. ವರ್ಜೀನಿಯಾ ವಿಶ್ವವಿದ್ಯಾಲಯದ ಕ್ಯಾಂಪಸ್‌ನಲ್ಲಿ ಬಂದೂಕುಧಾರಿ ವಿದ್ಯಾರ್ಥಿಯೊಬ್ಬ ಗುಂಡಿನ ಮಳೆಗರೆದು ಪರಾರಿಯಾಗಿದ್ದಾನೆ. ಘಟನೆಯಲ್ಲಿ ಮೂವರು ಸ್ಥಳದಲ್ಲೇ ಅಸುನೀಗಿದ್ದು, ಇಬ್ಬರು ತೀವ್ರ ಗಾಯಗೊಂಡಿದ್ದಾರೆ. ಇದರಿಂದ ಸೋಮವಾರದ ತರಗತಿಗಳನ್ನು ರದ್ದು ಮಾಡಲಾಗಿದೆ.
ಭಾನುವಾರ ರಾತ್ರಿ 10.30 ರ ಸುಮಾರಿನಲ್ಲಿ ಕಾಲೇಜ್ ಕ್ಯಾಂಪಸ್ಗೆ ಬಂದ ವಿದ್ಯಾರ್ಥಿ ಏಕಾಏಕಿ ಗುಂಡಿನ ದಾಳಿ ಮಾಡಿದ್ದಾನೆ. ಮೃತಪಟ್ಟ ಮೂವರು ವಿದ್ಯಾರ್ಥಿಗಳೇ ಎಂದೇ ತಿಳಿದು ಬಂದಿಲ್ಲ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಗುಂಡಿನ ದಾಳಿ ಮಾಡಿದ ವಿದ್ಯಾರ್ಥಿಯನ್ನು ಕ್ರಿಸ್ಟೋಫರ್ ಡಾರ್ನೆಲ್ ಜೋನ್ಸ್ ಜೂನಿಯರ್ ಎಂದು ಗುರುತಿಸಲಾಗಿದೆ. ಗುಂಡಿನ ದಾಳಿಗೆ ನಿಖರ ಕಾರಣ ತಿಳಿದುಬಂದಿಲ್ಲ. ಶೂಟೌಟ್ ಬಳಿಕ ಆತ ಸ್ಥಳದಿಂದ ಪರಾರಿಯಾಗಿದ್ದಾನೆ. ವಿವಿ ಆಡಳಿತ ಮಂಡಳಿ ನೀಡಿದ ದೂರಿನ ಮೇರೆಗೆ ಪೊಲೀಸರು ಹಂತಕನ ಹುಡುಕಾಟ ನಡೆಸುತ್ತಿದ್ದಾರೆ.