ಜಾಗತಿಕವಾಗಿ ಭಾರತ ಚೀನಾ ದೇಶದ ನಂತರ ಅತಿ ಹೆಚ್ಚು ಮಧುಮೇಹಿಗಳನ್ನು ಹೊಂದಿರುವ ಎರಡನೇ ದೊಡ್ಡ ದೇಶವಾಗಿದೆ. ಭಾರತದಲ್ಲಿ ಕರ್ನಾಟಕ ಮಧುಮೇಹಿಗಳನ್ನು ಹೊಂದಿರುವ ಮೂರನೇ ಅತಿ ದೊಡ್ಡ ರಾಜ್ಯವಾಗಿದೆ.
ಗುಣಮಟ್ಟದ ಆಹಾರ ಸೇವಿಸಬೇಕು: ದಿನದಿಂದ ದಿನಕ್ಕೆ ಮಧುಮೇಹಿಗಳ ಸಂಖ್ಯೆ ದೇಶ ಹಾಗೂ ರಾಜ್ಯದಲ್ಲಿ ಹೆಚ್ಚುತ್ತಿರುವುದು ಆತಂಕದ ಸಂಗತಿಯಾಗಿದ್ದರೆ, ಇದರ ನಿಯಂತ್ರಣಕ್ಕಾಗಿ ಸಾಕಷ್ಟು ಎಚ್ಚರಿಕೆ ಮೂಡುತ್ತಿದ್ದು ಜನ ಇದರ ಪಾಲನೆಯನ್ನು ಗಂಭೀರವಾಗಿ ಪರಿಗಣಿಸುತ್ತಿರುವುದು ಸಮಾಧಾನಕರ ಸಂಗತಿಯಾಗಿದೆ.
ವೈದ್ಯ ಲೋಕಕ್ಕೆ ದೊಡ್ಡ ಮಟ್ಟದ ಸವಾಲಾಗಿರುವ ಮಧುಮೇಹ ನಿಯಂತ್ರಣದ ವಿಚಾರವಾಗಿ ರಾಜ್ಯ ಸರ್ಕಾರ ಸಹ ಗಮನಹರಿಸಬೇಕು ಎಂದು ಕೆಲ ತಜ್ಞರು ಅಭಿಪ್ರಾಯಪಡುತ್ತಾರೆ. ರಾಜ್ಯದಲ್ಲಿ ಅನ್ನಭಾಗ್ಯ ಯೋಜನೆ ಇರುವಂತೆಯೇ ದೇಶದ ವಿವಿಧ ರಾಜ್ಯಗಳಲ್ಲಿ ಬಡವರಿಗೆ ಸರ್ಕಾರದಿಂದಲೇ ಅಕ್ಕಿ ವಿತರಿಸುವ ಕಾರ್ಯ ಆಗುತ್ತಿದೆ. ಪಡಿತರ ರೂಪದಲ್ಲಿ ನೀಡುವ ಅಕ್ಕಿಯನ್ನು ಸರ್ಕಾರಗಳು ವಿಪರೀತ ಪಾಲೀಶ್ಗೆ ಒಳಪಡಿಸುತ್ತಿವೆ. ಇದರಿಂದಾಗಿ ಜನರಿಗೆ ಅಕ್ಕಿಯಲ್ಲಿ ಇರುವ ನಿಜವಾದ ಸತ್ವ ಸಿಗದೆ ಹೋಗುತ್ತಿದೆ.
ತಜ್ಞ ವೈದ್ಯೆ ಡಾ ಟಿ ಕಮಲಾ
ಪಾಲೀಶ್ ಮಾಡಿದ ಅಕ್ಕಿ ಒಳ್ಳೆಯದಲ್ಲ: ಜನರಿಗಾಗಿ ಕೋಟ್ಯಂತರ ರೂಪಾಯಿ ವ್ಯಯಿಸುತ್ತಿರುವ ಸರ್ಕಾರ ಅದರ ಸರಿಯಾದ ಲಾಭ ಜನರಿಗೆ ಸಿಗದಂತೆ ಮಾಡಿದೆ. ಸರ್ಕಾರ ನೀಡುವ ಅಕ್ಕಿ ಅತಿಯಾದ ಪಾಲೀಶ್ಗೆ ಒಳಪಡುವುದರಿಂದ, ಜನ ಸತ್ವ ರಹಿತ ಅಕ್ಕಿ ಸೇವಿಸಿ ಮಧುಮೇಹ ಹೆಚ್ಚಿಸಿಕೊಳ್ಳುತ್ತಿದ್ದಾರೆ. ಅಕ್ಕಿಯ ಬಳಕೆಯಿಂದ ಮಧುಮೇಹ ಹೆಚ್ಚುವ ಸಾಧ್ಯತೆ ಇರುತ್ತದೆ. ಆದರೆ, ಎಲ್ಲಾ ಅಕ್ಕಿಯ ಬಳಕೆ ಅಪಾಯಕಾರಿ ಅಲ್ಲ.
ಅತಿಯಾಗಿ ಪಾಲಿಶ್ ಮಾಡಿ ತೆಳುವಾಗಿಸಿದ ಬಿಳಿ ಅಕ್ಕಿ ಸೇವನೆ ಆರೋಗ್ಯಕ್ಕೆ ಒಳ್ಳೆಯದಲ್ಲ. ಇದು ಮಧುಮೇಹ ಹೆಚ್ಚಳಕ್ಕೂ ಕಾರಣವಾಗಬಲ್ಲದು. ಜನ ಹುಟ್ಟಿನಿಂದಲೂ ಒಂದು ಆಹಾರ ಪದ್ಧತಿಗೆ ಹೊಂದಿಕೊಂಡಿರುತ್ತಾರೆ. ಅದನ್ನ ಬದಲಿಸುವ ಕಾರ್ಯವನ್ನು ಮಾಡಲು ಸಾಧ್ಯವಿಲ್ಲ. ತಾವು ಸೇವಿಸುವ ಆಹಾರವನ್ನೇ ಸರಿಯಾದ ಹಾಗೂ ಗುಣಮಟ್ಟದ ರೀತಿಯಲ್ಲಿ ಸೇವಿಸುವಂತೆ ವೈದ್ಯರು ಈಚಿನ ದಿನಗಳಲ್ಲಿ ಜನರಿಗೆ ಸಲಹೆ ನೀಡುತ್ತಿದ್ದಾರೆ.