Spread the love

ಮೈಸೂರು: ಸರ್ಕಾರಿ ಜಮೀನಿನಲ್ಲಿ ಉಳುಮೆ ಮಾಡುವ ರೈತರ ವಿರುದ್ಧ ಯಾವುದೇ ರೀತಿಯ ಕ್ರಿಮಿನಲ್ ಪ್ರಕರಣ ದಾಖಲಿಸುವುದಿಲ್ಲ ಎಂದು ಕಂದಾಯ ಸಚಿವ ಆರ್. ಅಶೋಕ್ ತಿಳಿಸಿದ್ದಾರೆ.ಹೆಚ್‌.ಡಿ. ಕೋಟೆ ತಾಲೂಕಿನ ಭೀಮನಕೊಲ್ಲಿಯಲ್ಲಿ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವರು, ಸರ್ಕಾರಿ ಜಮೀನುಗಳಲ್ಲಿ ಉಳುಮೆ ಮಾಡುವ ರೈತರನ್ನು ಕಾನೂನಿನಡಿ ಭೂಕಬಳಿಕೆದಾರರು ಎಂದು ಕ್ರಿಮಿನಲ್ ಕೇಸ್ ದಾಖಲಿಸಲಾಗುತ್ತಿದ್ದು, ಇದರಿಂದ ರೈತರು ಕೋರ್ಟ್ ಗೆ ಅಲೆಯುವಂತಾಗಿತ್ತು.

ಇದನ್ನು ತಡೆಯಲು ಕಾಯ್ದೆಗಳನ್ನು ಸಡಿಲ ಮಾಡಲಾಗಿದೆ. ರೈತರ ಮೇಲೆ ಭೂ ಒತ್ತುವರಿ ಕೇಸ್ ಹಾಕುವುದಿಲ್ಲ ಎಂದು ಹೇಳಿದ್ದಾರೆ. ಭೂ ಪರಿವರ್ತನೆ ಕಾಯ್ದೆ ನಿಯಮ ಸಡಿಲಿಕೆ ಮಾಡಲಾಗಿದೆ. ಡೀಮ್ಡ್ ಅರಣ್ಯದ ನಿಯಮವನ್ನು ಸಡಿಲಿಕೆ ಮಾಡಲಾಗಿದೆ. ರೈತರು ಉಳುಮೆ ಮಾಡಿಕೊಂಡು ಜೀವನ ಸಾಗಿಸುತ್ತಿದ್ದು, ಕೆಲವು ಕಡೆ ಒತ್ತುವರಿಯಾಗಿರುತ್ತದೆ. ಹೀಗಾಗಿ ನಗರ ಪ್ರದೇಶ ಹೊರತುಪಡಿಸಿ ಉಳಿದೆಡೆ ರೈತರ ಮೇಲೆ ಯಾವುದೇ ಭೂ ಒತ್ತುವರಿ ಪ್ರಕರಣ ದಾಖಲಿಸಿದಂತೆ ಸೂಚನೆ ನೀಡಲಾಗಿದೆ ಎಂದು ಹೇಳಿದ್ದಾರೆ.

ಭೂ ಪರಿವರ್ತನೆ ಮಾಡಿಸಿಕೊಳ್ಳಲು ನೋಂದಣಿಯಾದ 7 ದಿನದೊಳಗೆ ಪ್ರಕ್ರಿಯೆ ಪೂರ್ಣಗೊಳಿಸಲು ಆದೇಶಿಸಲಾಗಿದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರು ಮನೆ ನಿರ್ಮಿಸಲು ಭೂ ಪರಿವರ್ತನೆಗಾಗಿ ತಿಂಗಳುಗಟ್ಟಲೇ ಅಲೆಯಬೇಕಿತ್ತು, ನಿಯಮ ಸರಳೀಕರಣ ಮಾಡಿ 7 ದಿನಗಳಲ್ಲಿ ಭೂ ಪರಿವರ್ತನೆ ಮಾಡಿಕೊಡಲಾಗುವುದು. ಸರ್ಕಾರಿ ಜಮೀನುಗಳಲ್ಲಿ ಮನೆ ನಿರ್ಮಿಸುವವರಿಗೆ ಜಾಗದ ಮಾಲೀಕತ್ವ 94 ಸಿ ಅಡಿ ನೀಡಲಾಗುವುದು ಎಂದರು.


Spread the love

By admin