ಬೆಂಗಳೂರು: ಅಪ್ರಾಪ್ತ ಬಾಲಕನೊಬ್ಬನ ಮೇಲೆ ಅಸ್ವಾಭಾವಿಕ ಲೈಂಗಿಕ ಕ್ರಿಯೆ ನಡೆಸಿ ಕೊಲೆ ಮಾಡಿದ್ದ ಅಪರಾಧಿಗೆ ಬೆಂಗಳೂರಿನ 1ನೇ ತ್ವರಿತಗತಿಯ ನ್ಯಾಯಾಲಯ ಮರಣ ದಂಡನೆ ಶಿಕ್ಷೆ ವಿಧಿಸಿ ಮಹತ್ವದ ಆದೇಶ ನೀಡಿದೆ. ಯಶವಂತಪುರದ ತ್ರಿವೇಣಿ ರಸ್ತೆಯಲ್ಲಿರುವ ಕರೀಮಣಿ ಕೊಳಚೆ ಪ್ರದೇಶದ ನಿವಾಸಿ ಮೂರ್ತಿ ಶಿಕ್ಷೆಗೆ ಗುರಿಯಾದ ವ್ಯಕ್ತಿ. ಐಪಿಸಿ 302 ಅಡಿ ಅಪರಾಧಕ್ಕೆ ಮರಣ ದಂಡನೆ, 377 ಗೆ ಜೀವಾವಧಿ ಶಿಕ್ಷೆ ಮತ್ತು 50 ಸಾವಿರ ರೂ ದಂಡ ವಿಧಿಸಿ ನ್ಯಾಯಾಧೀಶರಾದ ಕೆ.ಎನ್. ರೂಪ ಆದೇಶ ನೀಡಿದ್ದಾರೆ.
ಜೊತೆಗೆ, ಘಟನೆಯಲ್ಲಿ ಸಾವನ್ನಪ್ಪಿದ ಬಾಲಕನ ನೊಂದ ಕುಟುಂಬಕ್ಕೆ 5 ಲಕ್ಷ ರೂ ಪರಿಹಾರ ನೀಡುವಂತೆ ಬೆಂಗಳೂರು ನಗರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ಸೂಚಿಸಿದ್ದಾರೆ. ಅಪ್ರಾಪ್ತ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯಗಳ ತಡೆ ಕಾಯಿದೆ ಜಾರಿಗೆ ಬಂದು 10 ವರ್ಷ ಕಳೆಯುತ್ತಿದೆ. ಆದರೂ ಈ ಕೃತ್ಯಗಳು ಕಡಿಮೆಯಾಗಿಲ್ಲ. ದಿನ ಕಳೆದಂತೆ ಹೆಚ್ಚಾಗುತ್ತಿವೆ. ದೇಶದ ಭವಿಷ್ಯವಾಗಿರುವ ಮಕ್ಕಳ ಮೇಲೆ ಕ್ರೂರತನ ತೋರುವ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸದಿದ್ದಲ್ಲಿ ಸಮಾಜಕ್ಕೆ ಕೆಟ್ಟ ಸಂದೇಶ ರವಾನೆಯಾಗಲಿದೆ ಎಂದು ನ್ಯಾಯಾಧೀಶರು ತಮ್ಮ ಆದೇಶದಲ್ಲಿ ಉಲ್ಲೇಖಿಸಿದ್ದಾರೆ.