ಉಕ್ರೇನ್: ಯುದ್ಧಪೀಡಿತ ಉಕ್ರೇನ್ ಗೆ ಬ್ರಿಟನ್ ಪ್ರಧಾನಿ ರಿಷಿ ಸುನಕ್ ಮೊದಲ ಭೇಟಿ ನೀಡಿದ್ದಾರೆ. ಉಕ್ರೇನ್ ಅಧ್ಯಕ್ಷ ವೊಲೊದಿಮಿರ್ ಝೆಲೆನ್ಸ್ಕಿ ಅವರನ್ನು ಭೇಟಿ ಮಾಡಿದ ರಿಷಿ ಸುನಕ್, ರಷ್ಯಾದೊಂದಿಗಿನ ಕದನದಲ್ಲಿ ಉಕ್ರೇನ್ ಗೆ ಯುಕೆ ಬೆಂಬಲವನ್ನು ಘೋಷಿಸಿದ್ದಾರೆ.
ಉಕ್ರೇನ್ ನಾಗರಿಕರ ರಕ್ಷಣೆಗಾಗಿ ಹಾಗೂ ಮೂಲ ಸೌಕರ್ಯ ರಕ್ಷಣೆಗಾಗಿ ವೈಮಾನಿಕ ರಕ್ಷಣಾ ಪ್ಯಾಕೇಜ್ ನ್ನು ನೀಡುವುದಾಗಿ ಸುನಕ್ ಭರವಸೆ ನೀಡಿದ್ದಾರೆ. ರಕ್ಷಣಾ ನೆರವಿನ ಜಿಬಿಪಿ 50 ಮಿಲಿಯನ್ ಪ್ಯಾಕೇಜ್ ನಲ್ಲಿ 125 ವೈಮಾನಿಕ ನಿಗ್ರಹ ಗನ್ ಗಳು ಇರಾನಿನ ಮಾರಣಾಂತಿಕ ಡ್ರೋನ್ ಅನ್ನು ಎದುರಿಸಲು ತಂತ್ರಜ್ಞಾನದ ಸರಬರಾಜು, ಡ್ರೋನ್ ನಿಗ್ರಹ ಎಲೆಕ್ಟ್ರಾನಿಕ್ ಯುದ್ಧ ಸಾಮರ್ಥ್ಯ ಹೊಂದಿರುವ ಉಪಕರಣಗಳು, ರಾಡಾರ್ಗಳು ಈ ಪ್ಯಾಕ್ ನಲ್ಲಿ ಸೇರಿವೆ. ಕೀವ್ ನಲ್ಲಿ ದೊರೆತ ಸ್ವಾಗತ ಅತ್ಯಂತ ಗೌರವಯುತವಾಗಿತ್ತು. ಪ್ರಜಾಪ್ರಭುತ್ವ ಹಾಗೂ ಸಾರ್ವಭೌಮತೆಯ ತತ್ವಗಳನ್ನು ರಕ್ಷಿಸುವುದಕ್ಕಾಗಿ ಇಷ್ಟೆಲ್ಲಾ ಬೆಲೆ ತೆತ್ತು ಹೋರಾಡುತ್ತಿರುವವರ ಭೇಟಿಗೆ ಅವಕಾಶ ಸಿಕ್ಕಿದೆ ಎಂದು ಸುನಕ್ ಹೇಳಿದ್ದಾರೆ. ಪ್ರಾರಂಭದಿಂದಲೂ ಉಕ್ರೇನ್ ಪರ ಬ್ರಿಟನ್ ನಿಂತಿರುವುದಕ್ಕೆ ನಾನು ಹೆಮ್ಮೆ ಪಡುತ್ತೇನೆ. ಬ್ರಿಟನ್ ಹಾಗೂ ಅದರ ಮಿತ್ರ ರಾಷ್ಟ್ರಗಳು ಉಕ್ರೇನ್ ನ್ನು ಬೆಂಬಲಿಸುವುದನ್ನು ಮುಂದುವರೆಸಲಿದೆ ಎಂದು ಸುನಕ್ ಹೇಳಿದ್ದಾರೆ.