Spread the love

ಬೆಂಗಳೂರಿನಲ್ಲಿ ಸಂಚಾರಿ ದಟ್ಟಣೆಯ ಸಮಸ್ಯೆಯನ್ನು ನಿವಾರಿಸಲು ಶೀಘ್ರದಲ್ಲೇ ಅಗತ್ಯವಿರುವ ಆರ್ಥಿಕ ನೆರವು ಬಿಡುಗಡೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೇಳಿದ್ದಾರೆ. ಈ ಸಂಬಂಧ ಬೆಂಗಳೂರಿನ ಸಿಂಗಸಂದ್ರದಲ್ಲಿ ಮಾತನಾಡಿದ ಅವರು, ರಾಜಧಾನಿ ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಸಂಚಾರಿ ದಟ್ಟಣೆ ಹೆಚ್ಚಾಗುತ್ತಲೇ ಇದೆ. ಇದು ದೊಡ್ಡ ಸಮಸ್ಯೆಯಾಗಿಯೂ ಪರಿಣಮಿಸಿದೆ. ಹೀಗಾಗಿ ಸಮಸ್ಯೆಯನ್ನು ಪರಿಹರಿಸಲು ಹಿರಿಯ ಅಧಿಕಾರಿಗಳ ವಿಶೇಷ ಸಭೆಯನ್ನು ಕರೆಯಲಾಗುವುದು. ಸಂಚಾರಿ ದಟ್ಟಣೆಗೆ ಅಗತ್ಯವಿರುವ ಹಣವನ್ನು ಸಹ ಬಿಡುಗಡೆ ಮಾಡಲು ಸರ್ಕಾರ ಸಿದ್ಧವಿದೆ ಎಂದು ಘೋಷಿಸಿದೆ. ನಿರ್ಭಯ ಯೋಜನೆಯಡಿ ನಗರಾದ್ಯಂತ 7 ಸಾವಿರ ಸಿಸಿ ಕ್ಯಾಮರಾಗಳನ್ನು ಅಳವಡಿಸಲು ಸರ್ಕಾರ ತೀರ್ಮಾನಿಸಿದೆ.

ಪ್ರಸ್ತುತ ಈ ತಿಂಗಳಿನಲ್ಲೇ 3 ಸಾವಿರ ಕ್ಯಾಮೆರಾಗಳನ್ನು ಅಳವಡಿಸಲಿದ್ದೇವೆ. ಇದರಿಂದ ಅಪರಾಧ ಚಟುವಟಿಕೆಗಳ ನಿಯಂತ್ರಣಕ್ಕೆ ಕಡಿವಾಣ ಬೀಳಲಿದೆ ಎಂದು ಅಭಿಪ್ರಾಯಪಟ್ಟರು. ದೇಶದಲ್ಲಿ ದೆಹಲಿ ಹೊರತುಪಡಿಸಿದರೆ ಬೆಂಗಳೂರಿಗೆ ಪ್ರತಿದಿನ ದೇಶ-ವಿದೇಶಗಳಿಂದ ಹೆಚ್ಚಿನ ಜನರು ವ್ಯಾಪಾರ ವಹಿವಾಟಿಗೆ ಬಂದು ಹೋಗುತ್ತಾರೆ. ಅಂದಾಜು 5 ಸಾವಿರ ವಾಹನಗಳು ನೊಂದಣಿಯಾಗುತ್ತವೆ. ಆರ್ಥಿಕವಾಗಿ ಬೆಳೆಯುತ್ತಿರುವ ಈ ನಗರಕ್ಕೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿಕೊಡುವುದು ಸರ್ಕಾರದ ಜವಾಬ್ದಾರಿ ಎಂದು ಹೇಳಿದರು.


Spread the love