ಚಂಡೀಗಢ: ಅನೇಕ ಭಯೋತ್ಪಾದನೆ ಪ್ರಕರಣಗಳಲ್ಲಿ ಭಾಗಿಯಾಗಿದ್ದ ದಿ ಮೋಸ್ಟ್ ವಾಟೆಂಡ್ ಖಲಿಸ್ತಾನಿ ಭಯೋತ್ಪಾದಕ ಹರ್ವಿಂದರ್ ಸಿಂಗ್ ರಿಂದಾ ಪಾಕಿಸ್ತಾನದಲ್ಲಿ ಸಾವನ್ನಪ್ಪಿರುವ ಕುರಿತು ಪಂಜಾಬ್ ಪೊಲೀಸ್ ಮೂಲಗಳು ತಿಳಿಸಿವೆ.
ಹರ್ವಿಂದರ್ ಸಿಂಗ್ ರಿಂದಾನ್ನನ್ನು ಪಾಕಿಸ್ತಾನದಲ್ಲಿ ಗುಂಡು ಹಾರಿಸಿ ಹತ್ಯೆಗೈಯಲಾಗಿದೆ ಎಂದು ದ್ಯಾವಿಂದರ್ ಭಂಬಿಹಾ ಎಂಬ ದರೋಡೆಕೋರರ ಗ್ಯಾಂಗ್ ಸೋಶಿಯಲ್ ಮೀಡಿಯಾದಲ್ಲಿ ಹೇಳಿಕೊಂಡಿದೆ.
ಮೇ ತಿಂಗಳಲ್ಲಿ ಪಂಜಾಬ್ ಪೊಲೀಸ್ ಗುಪ್ತಚರ ಕೇಂದ್ರ ಕಚೇರಿಯ ಮೇಲೆ ರಾಕೆಟ್ ಪ್ರೊಪೆಲ್ಡ್ ಗ್ರೆನೇಡ್ (ಆರ್‌ಪಿಜಿ) ದಾಳಿ ಮತ್ತು ಲುಧಿಯಾನ ಕೋರ್ಟ್ ಸ್ಫೋಟಕದ ಮಾಸ್ಟರ್ ಮೈಂಡ್ ಹರ್ವಿಂದರ್ ಸಿಂಗ್ ರಿಂದಾ ಆಗಿದ್ದನು. ಅಲ್ಲದೇ ಖ್ಯಾತ ಪಂಜಾಬಿ ಗಾಯಕ ಸಿಧು ಮೂಸ್ ವಾಲಾ ಅವರ ಹತ್ಯೆ ಪ್ರಕರಣದಲ್ಲೂ ಈತನ ಹೆಸರು ಕೇಳಿಬಂದಿತ್ತು. ಈತ ಅನೇಕ ಭಯೋತ್ಪಾದನೆ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಮತ್ತು ನಿಷೇಧಿತ ಖಲಿಸ್ತಾನಿ ಸಂಘಟನೆ ಬಬ್ಬರ್ ಖಾಲ್ಸಾ ಇಂಟರ್‍ನ್ಯಾಶನಲ್ ಸದಸ್ಯನಾಗಿದ್ದ.
ದರೋಡೆಕೋರರು ಮತ್ತು ಪಾಕಿಸ್ತಾನಿ ಮೂಲದ ಭಯೋತ್ಪಾದಕ ಗುಂಪುಗಳ ನಡುವಿನ ಪ್ರಮುಖ ಕೊಂಡಿಯಾಗಿದ್ದ ಹರ್ವಿಂದರ್ ಸಿಂಗ್ ರಿಂದಾ ರಾಷ್ಟ್ರೀಯ ಸುರಕ್ಷತೆಗೆ ಬೆದರಿಕೆಯೊಡ್ಡಿದ್ದ. ಡ್ರಗ್ಸ್ ಮತ್ತು ದೊಡ್ಡ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ಗಡಿಯಿಂದ ಆಚೆಗೆ ಕಳ್ಳಸಾಗಾಟಣೆ ಮಾಡುತ್ತಿದ್ದ. ಮೇ ತಿಂಗಳಿನಲ್ಲಿ ಹರಿಯಾಣದಲ್ಲಿ ವಾಹನದಿಂದ ಶಸ್ತ್ರಾಸ್ತ್ರ ಮತ್ತು ಸ್ಫೋಟಕಗಳನ್ನು ವಶಪಡಿಸಿಕೊಂಡು ಈತನ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಲಾಗಿತ್ತು.