Spread the love

ಅತ್ಯುತ್ತಮ ಅಭಿನಯದ ಮೂಲಕ ಚಿತ್ರರಂಗದಲ್ಲಿ ಬೇಡಿಕೆ ನಟನಾಗಿ ಗುರುತಿಸಿಕೊಂಡಿರುವ ನಟ ಡಾಲಿ ಧನಂಜಯ್. ರತ್ನನ್ ಪ್ರಪಂಚ, ಬೈರಾಗಿ, ಮಾನ್ಸೂನ್​ ರಾಗ, ಹೆಡ್‌ಬುಷ್ ಸಿನಿಮಾಗಳ‌ ಯಶಸ್ಸಿನ ಮ‌ೂಲಕ ಬೇಡಿಕೆ ಹೆಚ್ಚಿಸಿಕೊಂಡಿರುವ ಧನಂಜಯ್ ಬ್ಯಾಕ್ ಟು ಬ್ಯಾಕ್ ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚೆಗಷ್ಟೇ ರಮ್ಯಾ ಜೊತೆಗಿನ ಉತ್ತರಕಾಂಡ ಚಿತ್ರಕ್ಕೆ ಪೂಜೆ ಮುಗಿಸಿದರು. ಇದರ ಬೆನ್ನಲ್ಲೇ ಡಾಲಿ ಐತಿಹಾಸಿಕ ಪಾತ್ರದಲ್ಲಿ ಮಿಂಚಲು ರೆಡಿಯಾಗಿದ್ದಾರೆ.

ಹೌದು, ಅಲ್ಲಮ ಸಿನಿಮಾ ಬಳಿಕ‌ ಧನಂಜಯ್​ಗೆ ಐತಿಹಾಸಿಕ ಚಿತ್ರದಲ್ಲಿ ಅಭಿನಯಿಸುವ ಬಂಪರ್ ಆಫರ್​ವೊಂದು ಹುಡುಕಿಕೊಂಡು ಬಂದಿದೆ. ಉತ್ತರ ಕರ್ನಾಟಕದ ಹೋರಾಟಗಾರ ವೀರ ಸಿಂಧೂರ ಲಕ್ಷ್ಮಣ ಪಾತ್ರದಲ್ಲಿ ನಟಿಸಲು ಧನಂಜಯ ಸಜ್ಜಾಗಿದ್ದಾರೆ.

ಹೆಬ್ಬುಲಿ ಹಾಗು ಮದಗಜ ಅಂಥಹ ಸಿನಿಮಾಗಳನ್ನು ನಿರ್ಮಾಣ ಮಾಡಿದ್ದ ನಿರ್ಮಾಪಕ ಉಮಾಪತಿ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ.‌ ಈ ಹಿಂದೆ‌ ಸಿಂಧೂರ ಲಕ್ಷ್ಮಣ ಕಥೆಯನ್ನು ಕನ್ನಡದ ಒಬ್ಬ ಸ್ಟಾರ್ ನಟನಿಗೆ ನಿರ್ಮಾಣ ಮಾಡಲು ಪ್ಲ್ಯಾನ್ ಮಾಡಿದ್ದರು. ಆದರೆ ಕೆಲವು ವೈಯಕ್ತಿಕ ಕಾರಣಗಳಿಂದ ಆ ನಟನನ್ನು ಕೈಬಿಟ್ಟು ಈ ಪಾತ್ರಕ್ಕೆ ಸದ್ಯ ಸುದ್ದಿಯಲ್ಲಿರುವ ಧನಂಜಯ್ ಅವರನ್ನು ಸೆಲೆಕ್ಟ್ ಮಾಡಲಾಗಿದೆ. ನಿರ್ಮಾಪಕ ಉಮಾಪತಿ ಈಗಾಗಲೇ ಧನಂಜಯ್​ ಅವರಲ್ಲಿ ಮಾತನಾಡಿದ್ದಾರೆ. ಈ ಸಿನಿಮಾ ಕಥೆ ಕೇಳಿ ಡಾಲಿ ಕೂಡ ಒಪ್ಪಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ತರುಣ್ ಸುಧೀರ್ ನಿರ್ದೇಶನದಲ್ಲಿ ಈ ಚಿತ್ರ ಮೂಡಿ ಬರಲಿದೆ.


Spread the love