ತಿರುವನಂತಪುರಂ : ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಕೇರಳದ ಖಾದಿ ಮಂಡಳಿಯ ಉಪಾಧ್ಯಕ್ಷ ಪಿ. ಜಯರಾಜನ್ ಅವರಿಗೆ ಸೋಮವಾರ ರಾಜ್ಯ ಹಣಕಾಸು ಇಲಾಖೆಯು ಹೊಚ್ಚ ಹೊಸ ಬುಲೆಟ್ ಪ್ರೂಫ್ ಇನ್ನೋವಾ ಕಾರನ್ನು ಮಂಜೂರು ಮಾಡಿದೆ. ಈ ಕ್ರಮ ಪಿಣರಾಯಿ ವಿಜಯನ್ ಅವರ ಆಡಳಿತ ವೈಖರಿಯ ಮೇಲೆ ಹಲವಾರು ಪ್ರಶ್ನೆಗಳನ್ನು ಹುಟ್ಟು ಹಾಕಿದೆ. ರಾಜ್ಯದ ಇನ್ನಿಬ್ಬರು ಸಚಿವರಿಗೆ ಕೂಡ ಬುಲೆಟ್ ಪ್ರೂಫ್ ಕಾರು ನೀಡಲಾಗಿದೆ.
ಖಾದಿ ಮಂಡಳಿ ಉಪಾಧ್ಯಕ್ಷರಿಗೆ ಬುಲೆಟ್ ಪ್ರೂಫ್ ಕಾರು ನೀಡಿರುವ ವಿಚಾರ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಚರ್ಚೆಯ ವಿಷಯವಾಗಿದೆ. ಮಹಾತ್ಮಾ ಗಾಂಧೀಜಿಯವರು ಖಾದಿಗಾಗಿ ಹೋರಾಡಿ ಬುಲೆಟ್ ನಿಂದ ಮೃತಪಟ್ಟರು. ಆದರೆ, ಈಗ ಕಣ್ಣೂರಿನ ಸಿಪಿಐ-ಎಂ ಪ್ರಮುಖ ನಾಯಕ ಜಯರಾಜನ್ರಿಗೆ ಅದೇ ಖಾದಿ ಪ್ರಚಾರಕ್ಕೆ ಬುಲೆಟ್ ಪ್ರೂಫ್ ಕಾರು ಬೇಕಾಯ್ತು ಎಂದು ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ.
ಬುಲೆಟ್ ಪ್ರೂಫ್ ಕಾರ್ ಬಗ್ಗೆ ಚರ್ಚೆಗಳು ಜೋರಾಗುತ್ತಿದ್ದಂತೆಯೇ ಜಯರಾಜನ್ ಫೇಸ್ಬುಕ್ನಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ತನ್ನ ಕಾರು ದಶಕದಷ್ಟು ಹಳೆಯದಾಗಿದ್ದು, ಅದನ್ನು ಆಗಾಗ ರಿಪೇರಿ ಮಾಡಿಸಬೇಕಾಗುತ್ತಿತ್ತು. ಇದರಿಂದ ಅಗತ್ಯವಿದ್ದೆಡೆ ಸಕಾಲಕ್ಕೆ ತಲುಪಲಾಗುತ್ತಿರಲಿಲ್ಲ. ಇತ್ತೀಚೆಗಷ್ಟೇ ಆರ್ಎಸ್ಎಸ್ ಕಾರ್ಯಕರ್ತರು ತಮ್ಮ ಮನೆಯ ಮೇಲೆ ದಾಳಿ ಮಾಡಿದಾಗ ನಮ್ಮ ರಕ್ಷಣೆಗೆ ಮನೆಯಲ್ಲಿ ಬೆತ್ತದ ಕುರ್ಚಿ ಒಂದನ್ನು ಬಿಟ್ಟು ಬೇರೇನೂ ಇರಲಿಲ್ಲ. ನನ್ನನ್ನು ಬಲ್ಲವರಿಗೆ ಇದು ಅರ್ಥವಾಗುತ್ತದೆ ಎಂದು ಅವರು ಹೇಳಿಕೊಂಡಿದ್ದಾರೆ.