ಬೆಂಗಳೂರು: ಬೆಂಗಳೂರು ವೋಟರ್ ಐಡಿ ಪರಿಷ್ಕರಣೆ ಅಕ್ರಮ ಸಂಬಂಧ ಕೇಂದ್ರ ಚುನಾವಣಾ ಆಯೋಗದಿಂದ ತನಿಖೆ ನಡೆಸುವಂತೆ ಕಾಂಗ್ರೆಸ್ ವಕ್ತಾರ ರಮೇಶ್ ಬಾಬು ಒತ್ತಾಯಿಸಿದರು. ಈ ಸಂಬಂಧ ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಅವರು, ಈ ವಿಚಾರವಾಗಿ ಕಾನೂನಾತ್ಮಕ ಹೋರಾಟ ಹಾಗೂ ಬೆಳಗಾವಿ ಅಧಿವೇಶನದಲ್ಲಿ ಹೋರಾಟ ಮಾಡಲಿದೆ. ಇನ್ನು ಇಡೀ ದೇಶದ ಚುನಾವಣಾ ವ್ಯವಸ್ಥೆ ತಲೆತಗ್ಗಿಸುವಂತೆ ಅಧಿಕಾರ ದುರುಪಯೋಗ ಮಾಡಿಕೊಂಡು ಮತದಾರರ ಮಾಹಿತಿ ಕದ್ದು ಖಾಸಗಿಯವರಿಗೆ ನೀಡುವ ಪ್ರಯತ್ನ ನಡೆದಿದೆ. ಈ ಬಗ್ಗೆ ನಮ್ಮ ನಾಯಕರು ಮಾಧ್ಯಮಗಳಲ್ಲಿ ಚರ್ಚೆ ಮಾಡಿದ್ದಾರೆ.
ನಮ್ಮ ನಾಯಕರು ಕೇಂದ್ರ ಚುನಾವಣಾ ಆಯೋಗಕ್ಕೆ ಮನವಿ ಮಾಡಿದ್ದು, ನಮ್ಮ ಮನವಿಗೆ ಸ್ಪಂದಿಸಿ ಕೇಂದ್ರ ಚುನಾವಣಾ ಆಯೋಗ ಒಬ್ಬ ಅಧಿಕಾರಿಯನ್ನು ನೇಮಕ ಮಾಡಿದೆ ಎಂದು ಹೇಳಿದರು. ಕಳ್ಳನ ಮನಸ್ಸು ಹುಳ್ಳಗೆ ಎಂಬಂತೆ ಬಿಜೆಪಿಯವರು ವರ್ತಿಸಿದ್ದಾರೆ. ಕಾಂಗ್ರೆಸ್ ನಾಯಕರು ಮೊದಲೇ ಕೇಂದರ ಆ ಚುನಾವಣಾ ಆಯೋಗಕ್ಕೆ ದೂರು ನೀಡುವುದಾಗಿ ಹೇಳಿದ್ದೆವು. ಆದರೆ ಬಿಜೆಪಿಯವರು ತರಾತುರಿಯಲ್ಲಿ ಫ್ಯಾಕ್ಸ್ ಮೂಲಕ ಕೇಂದ್ರ ಆಯೋಗಕ್ಕೆ ದೂರು ನೀಡಿ, ಸುದ್ದಿ ಮಾಡಿಕೊಂಡಿದ್ದಾರೆ. ಬಿಜೆಪಿಗಿಂತ ಮುಂಚಿತವಾಗಿ ನಾನು ಕೇಂದ್ರ ಚುನಾವಣಾ ಆಯೋಗಕ್ಕೆ ಇ ಮೇಲ್ ಮೂಲಕ ದೂರು ಸಲ್ಲಿಕೆ ಮಾಡಿದ್ದೇನೆ. ನಮ್ಮ ನಾಯಕರು ಅವರನ್ನು ಭೇಟಿ ಮಾಡಿ ದೂರು ಸಲ್ಲಿಸುತ್ತಿದ್ದ ಹಿನ್ನೆಲೆಯಲ್ಲಿ ಈ ವಿಚಾರವನ್ನು ನಾವು ಬಹಿರಂಗಪಡಿಸಿರಲಿಲ್ಲ ಎಂದು ಹೇಳಿದ್ದಾರೆ.