ಚಿಕ್ಕಬಳ್ಳಾಪುರ: ರಾಜ್ಯಾದ್ಯಂತ ನೂತನವಾಗಿ 30 ಆಡಳಿತ ಸೌಧವನ್ನು ನಿರ್ಮಿಸುವ ಪ್ರಸ್ತಾವನೆಯನ್ನು ಮುಖ್ಯಮಂತ್ರಿಗಳಿಗೆ ಸಲ್ಲಿಸಲಾಗಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದ್ದಾರೆ.
ಜಿಲ್ಲೆಯ ಜರಬಂಡಹಳ್ಳಿಯಲ್ಲಿ ಆಯೋಜಿಸಿದ್ದ “ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಅನುಮೋದನೆ ನೀಡಿದ ಕೂಡಲೇ ಹೊಸ ಆಡಳಿತ ಸೌಧವನ್ನು ನಿರ್ಮಿಸಲಾಗುವುದು ಎಂದು ಹೇಳಿದರು.
ಕೊರೊನಾ ನಿಯಂತ್ರಿಸಲು ಇಲಾಖೆಯ ಎಲ್ಲ ರೀತಿಯ ಅಭಿವೃದ್ಧಿ ಅನುದಾನವನ್ನು ಬಳಸಲಾಗಿತ್ತು. ಈಗ ಸೋಂಕು ನಿಯಂತ್ರಣಗೊಂಡಿದ್ದು, ಆಡಳಿತ ಸೌಧ ನಿರ್ಮಾಣ ಕಾರ್ಯಕ್ಕೆ ಸದ್ಯವೇ ಚಾಲನೆ ಸಿಗಲಿದೆ ಎಂದು ತಿಳಿಸಿದರು.
ಜನರಿಗೆ ಸರಕಾರಿ ಸೌಲಭ್ಯಗಳು ಸುಲಭವಾಗಿ ದೊರೆಯಬೇಕು ಮತ್ತು ಆಡಳಿತ ವ್ಯವಸ್ಥೆಯನ್ನು ಮತ್ತಷ್ಟು ಚುರುಕುಗೊಳಿಸಲು 30 ಸುವರ್ಣ ಸೌಧಗಳನ್ನು ನಿರ್ಮಿಸಲು ಯೋಜನೆಯನ್ನು ರೂಪಿಸಿ ಮುಖ್ಯಮಂತ್ರಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಹೇಳಿದರು.