ಬೆಂಗಳೂರು: ಇತ್ತೀಚೆಗೆ ಸುರಿದ ಭಾರೀ ಮಳೆ ಹಿನ್ನೆಲೆಯಲ್ಲಿ ರೈತರು ಅಪಾರ ನಷ್ಟ ಅನುಭವಿಸಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಆ ಹಿನ್ನೆಲೆಯಲ್ಲಿ ಮುಂಬರುವ ಬಜೆಟ್‌ನಲ್ಲಿ ಈಗ ಸರಕಾರ ರೈತರಿಗೆ ನೀಡುವ ಪ್ರೋತ್ಸಾಹ ಮೊತ್ತವನ್ನು 5ರಿಂದ 10 ರೂ.ಗೆ ಏರಿಸುವಂತೆ ಮನವಿ ಸಲ್ಲಿಸಲಾಗುವುದು ಎಂದು ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಹೇಳಿದ್ದಾರೆ.
ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳಿ ನಿಯಮಿತ ಶನಿವಾರ ಹೆಬ್ಬಾಳದ ಜಿಕೆವಿಕೆ ಆವರಣದಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಹಾಲು ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಹೈನುಗಾರಿಕೆಯಲ್ಲಿ ತೊಡಗಿಕೊಂಡಿರುವ ರೈತರಿಗೆ ಸರಕಾರ ನೀಡುವ ಪ್ರೋತ್ಸಾಹಧನ ಬಿಟ್ಟರೆ ಬೇರೆ ಲಾಭಾಂಶವಿಲ್ಲ. ಆ ಹಿನ್ನೆಲೆಯಲ್ಲಿ ಪ್ರೋತ್ಸಾಹಧನ ಏರಿಕೆ ಸಂಬಂಧ ಜನವರಿಯಲ್ಲಿ ಬೃಹತ್ ರೈತರ ಸಮಾವೇಶ ಹಮ್ಮಿಕೊಳ್ಳಲು ತೀರ್ಮಾನಿಸಲಾಗಿದ್ದು, ಪ್ರತಿ ರೈತರ ಮನೆಯಿಂದ ಒಬ್ಬರು ಕಾರ್ಯಕ್ರಮಕ್ಕೆ ಆಗಮಿಸುವಂತೆ ಮನವಿ ಮಾಡಿದರು.
ಸರಕಾರ 1,200 ಕೋಟಿ ರೂ. ಬಜೆಟ್ ಮಂಡನೆ ಮಾಡಲಿದೆ. ಪ್ರೋತ್ಸಾಹಧನ ಹೆಚ್ಚಳಕ್ಕಾಗಿ ಇನ್ನೂ 800 ಕೋಟಿ ರೂ. ಸರಕಾರ ಬಜೆಟ್‌ನಲ್ಲಿ ನೀಡಲಿ, ಇದರಿಂದಾಗಿ ರಾಜ್ಯದ ರೈತರು ಬದುಕುತ್ತಾರೆ. ಯಾವತ್ತೂ ಕೆಎಂಎಫ್ ಸೇರಿ ರಾಜ್ಯದ 14 ಹಾಲು ಒಕ್ಕೂಟಗಳು ರೈತರ ಪರವಾಗಿ ಇರಲಿವೆ ಎಂದರು.