ಮುಂಗಾರು ಮಳೆ ಖ್ಯಾತಿಯ ಕೃಷ್ಣ ಹಾಗೂ ಅಭಿಷೇಕ್ ಅಂಬರೀಶ್ ಕಾಂಬಿನೇಷನ್ ನ ಕಾಳಿ ಸಿನಿಮಾಗೆ ಕಾಂತಾರ ಚಿತ್ರದ ನಾಯಕಿ ಸಪ್ತಮಿ ಗೌಡ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಈ ಹಿಂದೆ ಅಭಿಷೇಕ್ ಸಿನಿಮಾದಲ್ಲಿ ಸಪ್ತಮಿ ಗೌಡ ನಟಿಸುತ್ತಾರೆ ಎಂಬ ಸುದ್ದಿಯಾಗಿತ್ತು.
ಇದೀಗ ಅಧಿಕೃತವಾಗಿಯೇ ಸಪ್ತಮಿ ಗೌಡ ಅವರ ಈ ಮಾಹಿತಿಯನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಕಾಂತಾರ ಸಿನಿಮಾದ ಬಳಿಕ ಸಪ್ತಮಿ ಗೌಡಗೆ ಸಖತ್ ಡಿಮಾಂಡ್ ಕ್ರಿಯೇಟ್ ಆಗಿದೆ. ಕನ್ನಡದಲ್ಲಿ ಮಾತ್ರವಲ್ಲ, ಪರಭಾಷೆಯಿಂದಲೂ ಅವರಿಗೆ ಅವಕಾಶಗಳು ಹುಡುಕಿಕೊಂಡು ಬರುತ್ತಿವೆ. ಪರಭಾಷೆಯಿಂದ ಆಫರ್ಸ್ ಬರುತ್ತಿವೆ ಎಂದು ಅವರು ಈಗಾಗಲೇ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ. ಅದಕ್ಕೂ ಕನ್ನಡದಲ್ಲೇ ಎರಡ್ಮೂರು ಸಿನಿಮಾಗಳನ್ನು ಒಪ್ಪಿಕೊಂಡಿದ್ದಾರೆ. ಅದರಲ್ಲಿ ಕೃಷ್ಣ ನಿರ್ದೇಶನದ, ಅಭಿಷೇಕ್ ಅಂಬರೀಶ್ ನಟನೆಯ ಕಾಳಿ ಸಿನಿಮಾ ಕೂಡ ಒಂದಾಗಿದೆ.
ಪೈಲ್ವಾನ್ ಸೇರಿದಂತೆ ಹಲವು ಚಿತ್ರಗಳನ್ನು ನಿರ್ದೇಶನ ಮಾಡಿರುವ ಕೃಷ್ಣ ಇದೀಗ ಯಂಗ್ ರೆಬಲ್ ಸ್ಟಾರ್ ಅಭಿಷೇಕ್ ಅಂಬರೀಶ್ ಅವರಿಗೆ ಸಿನಿಮಾವೊಂದು ಮಾಡುತ್ತಿದ್ದು, ಈಗಾಗಲೇ ಚಿತ್ರಕ್ಕೆ ಕಾಳಿ ಎಂದು ಹೆಸರಿಡಲಾಗಿದೆ. ಸಿನಿಮಾ ಟೈಟಲ್ ಸೇರಿದಂತೆ ಹಲವು ವಿಚಾರಗಳನ್ನೂ ಕೃಷ್ಣ ಮಾಧ್ಯಮಗಳ ಜೊತೆ ಹಂಚಿಕೊಂಡಿದ್ದಾರೆ. ನಾಯಕಿಯ ಹೆಸರನ್ನು ಮಾತ್ರ ಗೌಪ್ಯವಾಗಿ ಇಟ್ಟಿದ್ದರು. ಇದೀಗ ನಾಯಕಿಯ ಹೆಸರು ಕೂಡ ಬಹಿರಂಗವಾಗಿದೆ.
ಕಾಳಿ ಸಿನಿಮಾದ ಕಥೆಯೂ ರೋಚಕವಾಗಿದೆ. ಕಾವೇರಿ ನದಿ ಗಲಾಟೆಯಲ್ಲಿ ನಡೆದಂತಹ ನೈಜ ಪ್ರೇಮಕಥೆಯನ್ನು ಈ ಸಿನಿಮಾಗಾಗಿ ನಿರ್ದೇಶಕರು ಅಳವಡಿಸಿಕೊಂಡಿದ್ದಾರೆ. ಅಲ್ಲದೇ, ರೆಬಲ್ ಈ ಸಿನಿಮಾದಲ್ಲಿ ರಗಡ್ ಲುಕ್ ನಲ್ಲಿ ಕಾಣಿಸಿಕೊಳ್ಳಲಿದ್ದು, ಈಗಾಗಲೇ ಫಸ್ಟ್ ಲುಕ್ ಕೂಡ ರಿಲೀಸ್ ಆಗಿದೆ. ಸದ್ಯ ಅಭಿಷೇಕ್ ಬ್ಯಾಡ್ ಮ್ಯಾನರ್ಸ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದು, ಸದ್ಯದಲ್ಲೇ ಕಾಳಿ ಸಿನಿಮಾದ ಶೂಟಿಂಗ್ ನಲ್ಲೂ ಅವರು ಪಾಲ್ಗೊಳ್ಳಲಿದ್ದಾರೆ.