ಬೀಜಿಂಗ್: 2020ರಿಂದ ಸಾರ್ವಜನಿಕವಾಗಿ ಕಾಣೆಯಾಗಿದ್ದ ಅಲಿಬಾಬಾ ಸಂಸ್ಥಾಪಕ ಜಾಕ್ ಮಾ ಸದ್ಯ ಜಪಾನ್‍ನಲ್ಲಿ ಕಾಣಿಸಿಕೊಂಡಿದ್ದು, ಟೋಕಿಯೋದಲ್ಲಿ ವಾಸಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಜಾಕ್ ಮಾ ಚೀನಾದಲ್ಲಿ ಏಕಸ್ವಾಮ್ಯ ವಿರೋಧಿ ನಿಯಮಗಳನ್ನು ಉಲ್ಲಂಘಿಸಿ ಚೀನಾ ಸರ್ಕಾರದಿಂದ ತೊಂದರೆಗೀಡಾಗಿದ್ದರು.
ಅದಾದ ಬಳಿಕ ಚೀನೀಸ್ ರೆಗ್ಯೂಲೇಟರ್ಸ್‍ನವರು ಅಲಿಬಾಬಾ ಸಂಸ್ಥೆಯ ಫಿಂಟೆಕ್ ದೈತ್ಯ ಆಂಟ್ ಫೈನಾನ್ಶಿಯಲ್‍ನ ಐಪಿಒವನ್ನು ಅಮಾನತಿನಲ್ಲಿಟ್ಟು, ಅಲಿಬಾಬಾ ಕಂಪನಿಯ ಮಾರುಕಟ್ಟೆ ಏಕಸ್ವಾಮ್ಯದ ಬಗ್ಗೆ ತನಿಖೆ ಆರಂಭಿಸಿದ್ದರು. ಆ ಬಳಿಕ ಜಾಕ್ ಮಾ ಕಾಣೆಯಾಗಿದ್ದರು ಎನ್ನಲಾಗಿತ್ತು.
ಮೂಲಗಳ ಪ್ರಕಾರ ಜಾಕ್ ಮಾ ಅವರು ಕಳೆದ 6 ತಿಂಗಳಿಂದ ಟೋಕಿಯೋದ ಹೊರಗಿನ ಗ್ರಾಮಾಂತರದಲ್ಲಿ ಸ್ಕೀ ರೆಸಾರ್ಟ್‍ಗಳಲ್ಲಿ ವಾಸಿಸುತ್ತಿದ್ದಾರೆ. ಜೊತೆಗೆ ಆಗಾಗ ಅಮೆರಿಕ ಹಾಗೂ ಇಸ್ರೇಲ್‍ಗೆ ಪ್ರವಾಸವನ್ನು ಕೈಗೊಳ್ಳುತ್ತಿದ್ದಾರೆ ಎನ್ನಲಾಗಿದೆ.
ಜಾಕ್ಮಾಹೇಳಿದ್ದೇನು?: 2020ರ ಅಕ್ಟೋಬರ್ 24 ರಂದು ಶಾಂಘೈನಲ್ಲಿ ಜಾಕ್ ಮಾ ಮಾತನಾಡಿದ್ದರು. ಈ ವೇಳೆ ಇಂದಿನ ಹಣಕಾಸು ವ್ಯವಸ್ಥೆಯು ಕೈಗಾರಿಕಾ ಯುಗದ ಪರಂಪರೆಯಾಗಿದೆ. ಮುಂದಿನ ಪೀಳಿಗೆ ಮತ್ತು ಯುವಜನರಿಗಾಗಿ ನಾವು ಹೊಸದನ್ನು ಸ್ಥಾಪಿಸಬೇಕು. ನಾವು ಪ್ರಸ್ತುತ ವ್ಯವಸ್ಥೆಯನ್ನು ಸುಧಾರಿಸಬೇಕು ಎಂದು ಭಾಷಣ ಮಾಡಿದ್ದು ಚೀನಾ ಸರ್ಕಾರದ ಆಕ್ರೋಶಕ್ಕೆ ಕಾರಣವಾಗಿತ್ತು.
ಜಾಕ್ ಮಾ ಭಾಷಣ ಚೀನಾದ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ, ಜನ ಜಾಕ್ ಮಾ ಸುರಕ್ಷತೆಯ ಬಗ್ಗೆ ಆಗಲೇ ಅನುಮಾನ ವ್ಯಕ್ತಪಡಿಸಿ ಪ್ರಶ್ನೆಗಳನ್ನು ಎತ್ತಿದ್ದರು. ಅದಾದ ಬಳಿಕ ಚೀನಾ ಸರ್ಕಾರದಿಂದ ಅನೇಕ ಸಂಕಷ್ಟ ಎದುರಿಸಿದ್ದರು.