ಬೆಂಗಳೂರು: ನಾನು ಅಧಿಕಾರಕ್ಕೆ ಬರದಿದ್ದರೆ ಕುರುಬ ಸಂಘ ಉಳಿಯುತ್ತಿರಲಿಲ್ಲ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. ಈ ಸಂಬಂಧ ಹೆಬ್ಬಾಳದಲ್ಲಿ ಮಾತನಾಡಿದ ಅವರು, ಕುರುಬ ಸಂಘದ ಉಳಿವಿಗೆ ಜೀವ ಪಣಕ್ಕಿಟ್ಟು ಶ್ರಮಿಸಿದ್ದೇನೆ. ಇನ್ನು ರಾಜ್ಯದಲ್ಲಿ ಕುರುಬ ಸಮುದಾಯಕ್ಕೆ ಕನಕ ಗುರು ಪೀಠ ಮಾಡಿದ್ದು ನಾನು. ಆದರೆ, ಬೇರೆಯವರು ನಾನು ಮಾಡಿದ್ದು ಎಂದು ಹೇಳಿಕೊಳ್ಳುತ್ತಾರೆ. ಕನಕ ಜಯಂತಿ ಎಲ್ಲಿಯೇ ನಡೆದಿದ್ದರೂ ಅದಕ್ಕೆ ಹೋಗುತ್ತಿದ್ದೆ. ಈಗ ಸ್ವಲ್ಪ ಕಡಿಮೆ ಮಾಡಿದ್ದೇನೆ. ಇನ್ನು ಕನಕ ಗುರುಪೀಠ ಮಾಡಲು ಈಶ್ವರಪ್ಪ ಮೊದಲ ಸಭೆಗೆ ಬಂದಾಗ ದುಡ್ಡು ಕೊಡಬೇಕು ಎಂದು ಅಂದ್ರು.
ಬಳಿಕ ಎರಡನೇ ಸಭೆಗೆ ಆ ಗಿರಾಕಿ ಕೆ.ಎಸ್.ಈಶ್ವರಪ್ಪ ಬರಲೇ ಇಲ್ಲ. ಆದರೂ ಕೂಡ ಕೆ.ಎಸ್.ಈಶ್ವರಪ್ಪ ನಮ್ಮವ ಎಂದು ಜೈಕಾರ ಹಾಕ್ತೀರಿ ಎಂದರು. ನಾನು ಓದುವಾಗ ಮಹಾರಾಜ ಹಾಸ್ಟೆಲ್ ಗೆ ಸೇರಿಕೊಳ್ಳುತ್ತೇನೆ ಎಂದು ಹೇಳಿದೆ. ನಮ್ಮ ಅಪ್ಪ ಬೇಡ, ಅಷ್ಟು ದುಡ್ಡು ಕೊಡಲು ಆಗಲ್ಲ ಎಂದರು. ಆಗ ರೂಮ್ ಮಾಡಿಕೊಂಡು ವಿದ್ಯಾಭ್ಯಾಸ ಮಾಡಿದೆ. ಎರಡು ಹೊತ್ತು ಅಡುಗೆ ಮಾಡಿಕೊಳ್ಳಲು ಆಗುತ್ತಿರಲಿಲ್ಲ. ಆಗ ಹೊಟೇಲ್ ನಲ್ಲಿ 32 ರೂಪಾಯಿ ಇತ್ತು. ಹೀಗಾಗಿ ನಾನು ಸಿಎಂ ಆದ ಮೇಲೆ ಹೆಚ್ಚು ಹಾಸ್ಟೆಲ್ ಗಳನ್ನು ಸ್ಥಾಪಿಸಿದೆ. ಹಾಸ್ಟೆಲ್ ಸಿಗದೆ ಇರುವವರಿಗೆ ವಿದ್ಯಾಸಿರಿ ಯೋಜನೆ ಜಾರಿಗೆ ತಂದು ವಿಧ್ಯಾರ್ಥಿಗಳಿಗೆ ಮಾಸಿಕ 1,500 ರೂಪಾಯಿ ಸಿಗುವಂತೆ ಮಾಡಿದೆ. ಈಗ ಬಿಜೆಪಿ ಸರ್ಕಾರ ಆ ಯೋಜನೆಯನ್ನು ನಿಲ್ಲಿಸಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.