ಬೆಂಗಳೂರು: ಕಳೆದ 3 ದಿನಗಳ ಹಿಂದೆ ಕರೆಂಟ್ ಶಾಕ್ ತಗುಲಿ ಗಂಭೀರವಾಗಿ ಗಾಯಗೊಂಡಿದ್ದ ಇಬ್ಬರು ಬಾಲಕರಲ್ಲಿ ಒಬ್ಬ ಇಂದು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ. ನಗರದ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ಬಾಲಕ ಸುಪ್ರೀತ್ ಭಾನುವಾರ ಬೆಳಗ್ಗೆ ಮೃತಪಟ್ಟಿದ್ದಾನೆ.
ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್‌ನಲ್ಲಿ ಈ ದುರ್ಘಟನೆ ನಡೆದಿದೆ. ಡಿಸೆಂಬರ್ 1 ರಂದು ಶಾಲೆಯಿಂದ ಮನೆಗೆ ಬಂದಿದ್ದ ಬಾಲಕರಿಬ್ಬರು ಮನೆಯ ಮಹಡಿ ಮೇಲಿದ್ದ ಪಾರಿವಾಳವನ್ನು ಹಿಡಿಯಲು ಹೋಗಿದ್ದರು. ಈ ವೇಳೆ ಕಬ್ಬಿಣದ ರಾಡ್‌ನಿಂದ ಹೈಟೆನ್ಷನ್ ವಯರ್ ಅನ್ನು ಬಾಲಕರು ಮುಟ್ಟಿದ್ದರು. ಘಟನೆಯ ತೀವ್ರತೆ ಎಷ್ಟಿತ್ತು ಎಂದರೆ ಮನೆಯಲ್ಲಿದ್ದ ಎಲೆಕ್ಟ್ರಿಕ್ ಉಪಕರಣಗಳೆಲ್ಲವೂ ಸ್ಫೋಟಗೊಂಡಿತ್ತು.
ಘಟನೆಯಲ್ಲಿ ಬಾಲಕ ಸುಪ್ರೀತ್ ದೇಹದಲ್ಲಿ ಸುಮಾರು ಶೇ.90 ರಷ್ಟು ಸುಟ್ಟ ಗಾಯಗಳಾಗಿತ್ತು. ಇನ್ನೊಬ್ಬ ಬಾಲಕ ಚಂದ್ರು ಕೂಡಾ ಸುಮಾರು ಶೇ.70 ರಷ್ಟು ಸುಟ್ಟ ಗಾಯಗಳಿಂದ ಆಸ್ಪತ್ರೆ ಸೇರಿದ್ದ. ದುರ್ಘಟನೆ ನಡೆದ ತಕ್ಷಣವೇ ಬಾಲಕರನ್ನು ನಗರದ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಇಂದು ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ಬಾಲಕ ಸುಪ್ರೀತ್ ಬೆಳಗ್ಗೆ 7:30ರ ವೇಳೆಗೆ ಕೊನೆಯುಸಿರೆಳೆದಿದ್ದಾನೆ.
ಸುಪ್ರೀತ್ ತಂದೆ ಮಂಜುನಾಥ್ ಹಾಗೂ ತಾಯಿ ಪ್ರೇಮ ಅವರ ಒಬ್ಬನೇ ಮಗನಾಗಿದ್ದ. ಬಾಲಕನ ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಯ ಶವಾಗಾರಕ್ಕೆ ಕಳುಹಿಸಲಾಗಿದೆ. ಮರಣೋತ್ತರ ಪರೀಕ್ಷೆಯ ಬಳಿಕ ಬಾಲಕನ ಮೃತದೇಹವನ್ನು ಕುಟುಂಬದವರಿಗೆ ರವಾನೆ ಮಾಡಲಾಗುತ್ತದೆ. ಘಟನೆಯಲ್ಲಿ ಗಾಯಗೊಂಡಿರುವ ಇನ್ನೊಬ್ಬ ಬಾಲಕ ಚಂದ್ರುವಿಗೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ.