ಮತ್ತೆ ಗಡಿ ಕ್ಯಾತೆ ತೆಗೆದಿರುವ ಮಹಾರಾಷ್ಟ್ರ ಸರ್ಕಾರ, ಬೆಳಗಾವಿ ನಮ್ಮದು ಎನ್ನುತ್ತಿದೆ. ಇದಕ್ಕೆ ಕರ್ನಾಟಕ ಸರ್ಕಾರ ಕೂಡ ತಕ್ಕ ಉತ್ತರ ನೀಡಿದ್ದು, ನ್ಯಾಯಾಲಯದಲ್ಲೂ ಸಮರ್ಥವಾಗಿ ತನ್ನ ವಾದ ಮಂಡನೆ ಮಾಡುತ್ತಿದೆ.
ಇದರ ಮಧ್ಯೆ ಮಹಾರಾಷ್ಟ್ರದ ಸಚಿವರು ಬೆಳಗಾವಿಗೆ ಭೇಟಿ ನೀಡುತ್ತೇವೆ ಎಂದು ಹೇಳಿರುವುದು ಪರಿಸ್ಥಿತಿ ಮತ್ತಷ್ಟು ಹದಗೆಡಲು ಕಾರಣವಾಗಿದೆ.
ಹೀಗಾಗಿ ಕರ್ನಾಟಕ ಸರ್ಕಾರ ಕಾನೂನು ಕ್ರಮ ಕೈಗೊಳ್ಳುವ ಖಡಕ್ ಎಚ್ಚರಿಕೆ ನೀಡಿದೆ.
ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಗೃಹ ಸಚಿವ ಅರಗ ಜ್ಞಾನೇಂದ್ರ, ಬೆಳಗಾವಿಗೆ ಭೇಟಿ ನೀಡಲು ಮುಂದಾಗಿರುವ ಮಹಾರಾಷ್ಟ್ರ ಸಚಿವರು ಕಾನೂನು ವ್ಯವಸ್ಥೆ ಹದಗೆಡಲು ಯತ್ನಿಸಿದರೆ ಕಠಿಣ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಹೇಳಿದ್ದಾರೆ.
ಬೆಳಗಾವಿಯಲ್ಲಿ ಈಗ ಶಾಂತ ಪರಿಸ್ಥಿತಿ ಇದ್ದು, ಮಹಾರಾಷ್ಟ್ರ ಸಚಿವರು ಭಾವನಾತ್ಮಕವಾಗಿ ಕೆರಳಿಸಲು ಯತ್ನಿಸಿದರೆ ಅದಕ್ಕೆ ಕಾನೂನು ರೀತಿಯಲ್ಲಿ ಉತ್ತರಿಸಬೇಕಾಗುತ್ತದೆ ಎಂದು ಅರಗ ಜ್ಞಾನೇಂದ್ರ ತಿಳಿಸಿದ್ದಾರೆ.