ಬಗೋಟ: ವಾಯುವ್ಯ ಕೊಲಂಬಿಯಾದಲ್ಲಿ ಭೂಕುಸಿತದಿಂದ ಬಸ್ ಒಂದು ಮಣ್ಣಿನಡಿ ಸಿಲುಕಿ ಕನಿಷ್ಠ 33 ಜನ ಸಾವನ್ನಪ್ಪಿದ್ದಾರೆ. 9 ಜನರನ್ನು ಜೀವಂತವಾಗಿ ರಕ್ಷಿಸಲಾಗಿದೆ ಎಂದು ಆಂತರಿಕ ಸಚಿವರು ತಿಳಿಸಿದ್ದಾರೆ.
ಭಾರಿ ಮಳೆಯಿಂದ ಉಂಟಾದ ಭೂಕುಸಿತ ರಾಜಧಾನಿ ಬೊಗೋಟಾದಿಂದ ಸುಮಾರು 230 ಕಿಮೀ ದೂರದ ರಿಸಾರಾಲ್ಡಾ ಪ್ರಾಂತ್ಯದ ಪ್ಯೂಬ್ಲೋ ರಿಕೊ ಮತ್ತು ಸಾಂಟಾ ಸಿಸಿಲಿಯಾ ಗ್ರಾಮಗಳ ನಡುವೆ ನಡೆದಿದೆ.
ಮೂವರು ಅಪ್ರಾಪ್ತ ವಯಸ್ಕರು ಸೇರಿದಂತೆ 33 ಜನರು ಮೃತಪಟ್ಟಿದ್ದಾರೆ. 9 ಜನರನ್ನು ರಕ್ಷಿಸಿದ್ದೇವೆ, ಅವರಲ್ಲಿ ನಾಲ್ವರ ಸ್ಥಿತಿ ಗಂಭೀರವಾಗಿದೆ ಎಂದು ಆಂತರಿಕ ಸಚಿವ ಅಲ್ಫೊನ್ಸೊ ಪ್ರಾಡಾ ಸೋಮವಾರ ಸುದ್ದಿಗಾರರಿಗೆ ತಿಳಿಸಿದರು.
ಕೊಲಂಬಿಯಾ ಅಧ್ಯಕ್ಷ ಗುಸ್ಟಾವೊ ಪೆಟ್ರೋ ಅವರು ಟ್ವಿಟರ್ ಸಂದೇಶದಲ್ಲಿ ಘಟನೆಯನ್ನು ದುರಂತ ಎಂದು ಹೇಳಿದ್ದು, ಸಂತ್ರಸ್ತರ ಕುಟುಂಬಗಳೊಂದಿಗೆ ಸರ್ಕಾರವಿದೆ. ರಕ್ಷಣಾ ಕಾರ್ಯಕರ್ತರು ಘಟನಾ ಸ್ಥಳದಲ್ಲಿ ಶೋಧ ನಡೆಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಕೊಲಂಬಿಯಾದಲ್ಲಿ ಭಾರೀ ಮಳೆಯಾಗಿದ್ದು, ಸರ್ಕಾರದ ಅಂಕಿಅಂಶಗಳ ಪ್ರಕಾರ ಭಾರೀ ಮಳೆಗೆ ಸಂಬಂಧಿಸಿದ ಘಟನೆಗಳಲ್ಲಿ 2022 ರಲ್ಲಿ ಇದುವರೆಗೆ 216 ಕ್ಕೂ ಹೆಚ್ಚು ಜನ ಮೃತಪಟ್ಟಿದ್ದಾರೆ. 48 ಜನರು ನಾಪತ್ತೆಯಾಗಿದ್ದಾರೆ.