ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರ ಪುತ್ರ ಬಿ.ವೈ. ವಿಜಯೇಂದ್ರ ಕಣಕ್ಕಿಳಿಯುವುದು ನಿಶ್ಚಿತವಾಗಿದ್ದು, ಆದರೆ ಯಾವ ಕ್ಷೇತ್ರ ಎಂಬುದು ಇನ್ನೂ ಖಚಿತವಾಗಿಲ್ಲ. ಅಲ್ಲದೆ ಅವರ ಸ್ಪರ್ಧೆ ಹೈಕಮಾಂಡ್ ನಿರ್ಧಾರದ ಮೇಲೆ ಅವಲಂಬಿತವಾಗಿದೆ.
ಯಡಿಯೂರಪ್ಪನವರಿಗೆ ತಮ್ಮ ಪುತ್ರನನ್ನು ತಾವು ಪ್ರತಿನಿಧಿಸುತ್ತಿರುವ ಶಿಕಾರಿಪುರ ವಿಧಾನಸಭಾ ಕ್ಷೇತ್ರದಿಂದಲೇ ಕಣಕ್ಕಿಳಿಸುವ ಚಿಂತನೆ ಇದ್ದು, ಹೀಗಾಗಿ ಚುನಾವಣಾ ರಾಜಕೀಯದಿಂದ ನಿವೃತ್ತಿ ಘೋಷಿಸಿದ್ದಾರೆ. ಅಲ್ಲದೆ ವಿಜಯೇಂದ್ರ ಸ್ಪರ್ಧೆಗೆ ಪೂರಕ ಸಿದ್ಧತೆಗಳು ಶಿಕಾರಿಪುರದಲ್ಲಿ ನಡೆಯುತ್ತಿವೆ.
ಇದರ ಮಧ್ಯೆ ಭಾನುವಾರದಂದು ಮೈಸೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿರುವ ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷರೂ ಆಗಿರುವ ವಿಜಯೇಂದ್ರ, ಪಕ್ಷದ ವರಿಷ್ಠರು ಸೂಚಿಸಿದರೆ ವರುಣಾ ಕ್ಷೇತ್ರದಿಂದ ಸಿದ್ದರಾಮಯ್ಯನವರ ವಿರುದ್ಧ ಕಣಕ್ಕಿಳಿಯಲು ನಾನು ಸಿದ್ಧ ಎಂದು ಹೇಳಿದ್ದಾರೆ. ಅಲ್ಲದೆ ಪಕ್ಷ ಯಾವುದೇ ಸವಾಲು ಕೊಟ್ಟರೂ ಅದನ್ನು ನಿಭಾಯಿಸುತ್ತೇನೆ ಎಂದಿದ್ದಾರೆ.