ನಗರದ ಉತ್ತರ ವಿಭಾಗದಲ್ಲಿ ಪುಡಿ ರೌಡಿಗಳು ಅಟ್ಟಹಾಸ ಮೆರೆಯುತ್ತಿದ್ದು, ಹಾಡುಹಗಲೇ ಲಾಂಗ್, ಮಚ್ಚು ಹಿಡಿದುಕೊಂಡು ರಸ್ತೆಯಲ್ಲಿ ಓಡಾಡುತ್ತಿದ್ದಾರೆ. ಡ್ರಗ್ ಪೆಡ್ಲರ್ಗಳ ಬಗ್ಗೆ ಮಾಹಿತಿ ನೀಡಿದ್ದಕ್ಕೆ ಜೈಲಿನಿಂದ ಹೊರಬಂದು ಕೊಲೆ ಯತ್ನ ನಡೆಸಿದ್ದಾರೆ. ವ್ಯಕ್ತಿಯೊಬ್ಬರು ಡ್ರಗ್ಸ್ ಮಾರಾಟದ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದರು.
ಮಾಹಿತಿ ಆಧರಿಸಿ ಕಾರ್ಯಾಚರಣೆಗೆ ಇಳಿದಿದ್ದ ರಾಜಗೋಪಾಲನಗರ ಠಾಣೆ ಪೊಲೀಸರು, ಅಯೂಬ್, ರೋಷನ್ ಎಂಬವರನ್ನು ಬಂಧಿಸಿ ಮಾದಕ ವಸ್ತುಗಳನ್ನು ಜಪ್ತಿ ಮಾಡಿದ್ದರು. ಡ್ರಗ್ಸ್ ಪ್ರಕರಣದಲ್ಲಿ ಜೈಲು ಸೇರಿದ್ದ ಇಬ್ಬರು ಆರೋಪಿಗಳು, ಜಾಮೀನು ಪಡೆದು ಹೊರಬಂದಿದ್ದರು.
ಜೈಲಿನಿಂದ ಹೊರಬಂದಿದ್ದ ಆರೋಪಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದ ವ್ಯಕ್ತಿಗಾಗಿ ಹುಡುಕಾಟ ನಡೆಸಿದ್ದಾರೆ. ಲಾಂಗ್ ಹಿಡಿದು ಕೊಲೆ ಮಾಡಲು ಬಂದಿದ್ದ ಆರೋಪಿಗಳನ್ನು ನೋಡಿದ ಮಾಹಿತಿದಾರ ಕ್ಷಣಾರ್ಧದಲ್ಲೇ ಸ್ಥಳದಿಂದ ಓಡಿ ಹೋಗಿ ಜೀವ ಉಳಿಸಿಕೊಂಡಿದ್ದಾರೆ. ಅಯೂಬ್ ಹಾಗೂ ರೋಷನ್ ಕೃತ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಪೊಲೀಸರಿಗೆ ಮಾಹಿತಿ ನೀಡಿದ್ದಕ್ಕೆ ಜೀವ ಕಳೆದುಕೊಳ್ಳುವ ಭಯ ಎದುರಾಗಿದ್ದು, ಪೆಡ್ಲರ್ ಬಗ್ಗೆ ಮಾಹಿತಿ ನೀಡಿದ್ದ ವ್ಯಕ್ತಿಗೆ ರಕ್ಷಣೆ ನೀಡುವಲ್ಲಿ ಪೊಲೀಸರು ವಿಫಲರಾಗಿದ್ದಾರೆ.
ಬೆಂಗಳೂರಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ಯಾ? ಕಂಡ ಕಂಡಲ್ಲಿ ಪುಡಿ ರೌಡಿಗಳು ಲಾಂಗ್ ಹಿಡಿದು ಓಡಾಡುತ್ತಿದ್ದಾರೆ. “ಕ್ರೈಂ ನಡೆದಾಗ ಪೊಲೀಸರಿಗೆ ಮಾಹಿತಿ ನೀಡಿ, ನಿಮ್ಮ ಮಾಹಿತಿ ಗೌಪ್ಯವಾಗಿರುತ್ತದೆ. ನಾವು ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ, ಕಾನೂನು ಸುವ್ಯವಸ್ಥೆಗೆ ನಮ್ಮೊಂದಿಗೆ ಸಹಕರಿಸಿ” ಎಂದು ಪೊಲೀಸ್ ಇಲಾಖೆ ಸಾರ್ವಜನಿಕರಿಗೆ ಮನವಿ ಮಾಡುತ್ತಿರುತ್ತದೆ. ಆದರೆ ನಿಜಕ್ಕೂ ಪೊಲೀಸರಿಗೆ ಮಾಹಿತಿ ನೀಡಿದರೆ ಮಾಹಿತಿ ನೀಡಿದವರು ಸುರಕ್ಷಿತವಾಗಿರುತ್ತಾರಾ? ಮಾಹಿತಿ ನೀಡಿದ ಎಲ್ಲರಿಗೂ ಪೊಲೀಸರು ರಕ್ಷಣೆ ಕೊಡುತ್ತಾರೆಯೇ ಎಂಬುದು ಈಗಿನ ಪ್ರಶ್ನೆ.