ಕಾಶಿನಾಥ್ ನಟನೆಯ ‘ಅನುಭವ’ ಸಿನಿಮಾದ ಮೂಲಕ ಸಿನಿಮಾ ರಂಗಕ್ಕೆ ಎಂಟ್ರಿಕೊಟ್ಟ ನಟಿ ಅಭಿನಯ ಅವರಿಗೆ ಜೈಲು ಶಿಕ್ಷೆಯಾಗಿದೆ. ವರದಕ್ಷಿಣೆ ಕಿರುಕುಳ ಕೇಸ್ ನಲ್ಲಿ ಅಭಿನಯ ಅವರಿಗೆ 2 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ. ಕನ್ನಡ ಚಿತ್ರರಂಗದ ಹಿರಿಯ ನಟಿ ಹಾಗೂ ಖ್ಯಾತ ಕಿರುತೆರೆ ನಟಿಯಾಗಿಯೂ ಅಭಿನಯ ಗುರುತಿಸಿಕೊಂಡಿದ್ದಾರೆ.
ಪೋಷಕರೊಂದಿಗೆ ಸೇರಿಕೊಂಡು ಅತ್ತಿಗೆಗೆ ವರದಕ್ಷಿಣೆ ಕಿರುಕುಳ ನೀಡಿದ ಆರೋಪ ಇವರ ಮೇಲಿತ್ತು. ಈ ಹಿನ್ನೆಲೆಯಲ್ಲಿ ಹೈಕೋರ್ಟ್ ನ್ಯಾ.ಎನ್ ಬಿ ಪ್ರಭಾಕರ್ ಶಾಸ್ತ್ರಿ ಅವರಿದ್ದ ಏಕಸದಸ್ಯ ಪೀಠ ಈ ಆದೇಶ ಹೊರಡಿಸಿದೆ.
1971ರಲ್ಲಿ ಜನಿಸಿದ ಅಭಿನಯ 1983ರಲ್ಲಿ ತೆರೆಕಂಡ ಕಾಶಿನಾಥ್ ನಟನೆಯ ಅನುಭವ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಈ ಚಿತ್ರದಲ್ಲಿ ಅಭಿನಯ ನಟನೆಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿತ್ತು. ಈ ಸಿನಿಮಾದಿಂದಲೇ ಅಭಿನಯ ಸಾಕಷ್ಟು ಹೆಸರು ಘಳಿಸಿದರು. ಈ ಚಿತ್ರ ಹಿಟ್ ಆದ ಬಳಿಕ 1983-84ರಲ್ಲಿ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಯನ್ನು ಪಡೆದರು. ಅನುಭವ’ ಸಿನಿಮಾ ಅಭಿನಯ ಅವರಿಗೆ ಅತ್ಯುತ್ತಮ ನಟಿ ಪ್ರಶಸ್ತಿ ತಂದುಕೊಟ್ಟಿತ್ತು.
ಅಭಿನಯ 1980 ಮತ್ತು 1990 ರ ದಶಕದುದ್ದಕ್ಕೂ ಅನೇಕ ಹಿಟ್ ಚಿತ್ರಗಳಲ್ಲಿ ಹೆಚ್ಚಾಗಿ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡರು. ಸಿನಿಮಾ ರಂಗದಿಂದ ಕೆಲ ಸಮಯ ಬ್ರೇಕ್ ತೆಗೆದುಕೊಂಡಿದ್ದ ಅಭಿನಯ 2019 ರಲ್ಲಿ ತೆರೆಕಂಡ ‘ಕ್ರಶ್’ ಚಿತ್ರದ ಮೂಲಕ ಬೆಳ್ಳಿ ಪರದೆಗೆ ಮರಳಿದರು. ಸದ್ಯ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಧಾರವಾಹಿಯಲ್ಲಿ ಅಭಿನಯ ನಟಿಸುತ್ತಿದ್ದಾರೆ.