Spread the love

ವದೆಹಲಿ: ಭ್ರಷ್ಟರ ವಿರುದ್ಧ ಚಾಟಿ ಬೀಸಿದ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ಭ್ರಷ್ಟಾಚಾರ ಆರೋಪ ಹೊತ್ತ ಸರ್ಕಾರಿ ನೌಕರರು ಮತ್ತು ಅಧಿಕಾರಿಗಳ ವಿರುದ್ಧ ಲಭ್ಯವಿರುವ ಸಾಂದರ್ಭಿಕ ಪುರಾವೆಗಳ ಆಧಾರದಲ್ಲಿ ಶಿಕ್ಷೆ ವಿಧಿಸಬಹುದು ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ.

 

ಭ್ರಷ್ಟ ಸರ್ಕಾರಿ ಅಧಿಕಾರಿಗಳು ಮತ್ತು ನೌಕರರಿಗೆ ಬಿಸಿ ಮುಟ್ಟಿಸಿರುವ ನ್ಯಾಯಾಲಯ, ಸಾಂದರ್ಭಿಕ ಪುರಾವೆಗಳ ಆಧಾರದಲ್ಲಿಯೇ ಶಿಕ್ಷೆಗೆ ಗುರಿ ಪಡಿಸಬಹುದು ಎಂದು ಹೇಳಿದೆ.

ನ್ಯಾಯಮೂರ್ತಿ ಎಸ್.ಎ. ನಜೀರ್ ನೇತೃತ್ವದ ಐವರು ನ್ಯಾಯಮೂರ್ತಿಗಳಾದ ಬಿ.ಆರ್. ಗವಾಯಿ, ಎ.ಎಸ್. ಭೂಪಣ್ಣ, ವಿ. ರಾಮಸುಬ್ರಮಣಿಯನ್, ಬಿ.ವಿ. ನಾಗರತ್ನ ಅವರನ್ನು ಒಳಗೊಂಡ ಸಾಂವಿಧಾನಿಕ ಪೀಠ ಭ್ರಷ್ಟರ ವಿರುದ್ಧ ಚಾಟಿ ಬೀಸಿದ್ದು, ಸರ್ಕಾರಿ ಅಧಿಕಾರಿಗಳ ಅಕ್ರಮ ಆಸ್ತಿ ಸಂಪಾದನೆ, ಲಂಚ ಪಡೆದ ಆರೋಪಗಳಿಗೆ ಮೌಖಿಕ ಅಥವಾ ದೃಢೀಕೃತ ದಾಖಲೆಗಳಿಲ್ಲದಿದ್ದರೂ ಸಾಂದರ್ಭಿಕ ಸಾಕ್ಷಿಗಳನ್ನು ಆದರಿಸಿ ತಪ್ಪಿತಸ್ಥರೆಂದು ಪರಿಗಣಿಸಿ ಶಿಕ್ಷೆ ವಿಧಿಸಬಹುದು ಎಂದು ತೀರ್ಪು ನೀಡಿದೆ.

ಸರ್ಕಾರಿ ಅಧಿಕಾರಿಗಳು, ನೌಕರರ ವಿರುದ್ಧ ಸೂಕ್ತ ದಾಖಲೆಗಳಿಲ್ಲದಿದ್ದಾಗ ಆರೋಪ ಸಾಬೀತುಪಡಿಸುವುದು ಹೇಗೆ ಎಂಬ ಅರ್ಜಿಯ ಕುರಿತು ಸುದೀರ್ಘ ವಿಚಾರಣೆ ನಡೆಸಿ ನವೆಂಬರ್ 23ರಂದು ತೀರ್ಪು ಕಾಯ್ದಿರಿಸಿತ್ತು.

ದೂರುದಾರ ಅಕಾಲಿಕ ಮರಣಕ್ಕೆ ತುತ್ತಾದರೆ, ಸಾಕ್ಷಿ ಹೇಳಲು ಆತ ಅಲಭ್ಯವಾದರೆ ಅಂತಹ ಸಂದರ್ಭದಲ್ಲಿ ಇತರೆ ಸಾಕ್ಷಿಗಳನ್ನು ಪರಿಗಣಿಸಿ ಭ್ರಷ್ಟ ನೌಕರರ ಆರೋಪವನ್ನು ಪ್ರಾಸಿಕ್ಯೂಷನ್ ಸಾಬೀತುಪಡಿಸಬಹುದು ಎಂದು ನ್ಯಾಯಾಲಯ ಹೇಳಿದೆ. ಬೇರೆ ಬೇರೆ ಕಾರಣಗಳಿಂದ ಅಧಿಕಾರಿಗಳ ವಿರುದ್ಧ ಸಾಕ್ಷ್ಯ ಹೇಳಲು ದೂರುದಾರ ಲಭ್ಯವಿಲ್ಲದಿದ್ದರೂ ಸಹ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ ಶಿಕ್ಷೆ ವಿಧಿಸಬಹುದು ಎಂದು ತೀರ್ಪು ನೀಡಲಾಗಿದೆ.


Spread the love