ಭೋಪಾಲ್: ಆಕೆ ಇತರೆ ವಿದ್ಯಾರ್ಥಿಗಳ ತರವೇ ದಿನವೂ ಕಾಲೇಜಿನಲ್ಲಿ ಇರುತ್ತಿದ್ದಳು, ಸ್ನೇಹಿತರ ಜೊತೆ ಹರಟೆ ಹೊಡೆಯುತ್ತಿದ್ದಳು.. ಕ್ಲಾಸ್‌ಗೆ ಬಂಕ್ ಹಾಕಿ ಕ್ಯಾಂಟಿನ್‌ನಲ್ಲಿ ಸಮಯವನ್ನು ಕಳೆಯುತ್ತಿದ್ದಳು.. ಆದರೆ, ಆಕೆ ಕೇವಲ ವಿದ್ಯಾರ್ಥಿ ಮಾತ್ರ ಆಗಿದ್ದಿಲ್ಲ, ಬದಲಾಗಿ ಕ್ಯಾಂಪಸ್‌ನಲ್ಲಿ ನಡೆಯುತ್ತಿದ್ದ ರ‍್ಯಾಗಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖವಾದ ಸಾಕ್ಷ್ಯಾಧರಗಳನ್ನು ಸಂಗ್ರಹಿಸಲು ಬಂದಿದ್ದ ಅಂಡರ್ ಕವರ್ ಪೊಲೀಸ್..
ಹೌದು, ಕಾಲೇಜಿನಲ್ಲಿ ನಡೆಯುತ್ತಿದ್ದ ರ‍್ಯಾಗಿಂಗ್ ಪ್ರಕರಣ ಭೇದಿಸಲು 24 ವರ್ಷದ ಶಾಲಿನಿ ಚವ್ಹಾಣ್ ಎಂಬಾಕೆ ಬರೋಬ್ಬರಿ ಮೂರು ತಿಂಗಳು ಕಾಲೇಜು ವಿದ್ಯಾರ್ಥಿಯಾಗಿಯೇ ನಟಿಸಿದ್ದಾರೆ. ಇವರು ಮಧ್ಯಪ್ರದೇಶ ಪೊಲೀಸ್ ಇಲಾಖೆಯಲ್ಲಿ ಕಾನ್‌ಸ್ಟೇಬಲ್ ಆಗಿ ಸೇವೆ ಸಲ್ಲಿಸುತ್ತಿದ್ದು, ಒಂದು ಪ್ರಕರಣದ ಸಾಕ್ಷಧಾರ ಸಂಗ್ರಹಿಸಲು ಮೂರು ತಿಂಗಳು ಕಾಲೇಜು ವಿದ್ಯಾರ್ಥಿಯಾಗಿರುವುದು ನೆಟ್ಟಿಗರ ಮೆಚ್ಚುಗೆಗೆ ಪಾತ್ರವಾಗಿದೆ.
ಇಂದೋರ್‌ನ ಮಹಾತ್ಮಾ ಗಾಂಧಿ ಸ್ಮಾರಕ ವೈದ್ಯಕೀಯ ಕಾಲೇಜಿನಲ್ಲಿ ಶಾಲಿನಿ ಚೌಹಾಣ್ ವಿದ್ಯಾರ್ಥಿಯಾಗಿ ನಟಿಸಿದ್ದಾರೆ. ಈ ಮೂಲಕ ಮೊದಲ ವರ್ಷದ ವಿದ್ಯಾರ್ಥಿಗಳನ್ನು ಕ್ರೂರವಾಗಿ ರ‍್ಯಾಗಿಂಂಗ್ ಮಾಡಿದ್ದ 11 ಹಿರಿಯ ವಿದ್ಯಾರ್ಥಿಗಳನ್ನು ಗುರುತಿಸಿದ್ದಾರೆ. ಆ ಎಲ್ಲ ಸಿನಿಯರ್ ವಿದ್ಯಾರ್ಥಿಗಳನ್ನು ಈಗ ಕಾಲೇಜು ಮತ್ತು ಹಾಸ್ಟೆಲ್‌ನಿಂದ ಮೂರು ತಿಂಗಳು ಅಮಾನತು ಮಾಡಲಾಗಿದೆ.
ಅನಾಮಧೇಯದೂರುಗಳಬೆನ್ನತ್ತಿ!
ಈ ಬಗ್ಗೆ ಪೊಲೀಸ್ ಇನ್ಸ್‌ಪೆಕ್ಟರ್ ತೆಹಜೀಬ್ ಕ್ವಾಜಿ ಪ್ರತಿಕ್ರಿಯಿಸಿದ್ದು, ಕಾಲೇಜಿನಲ್ಲಿ ನಡೆಯುತ್ತಿರುವ ರ‍್ಯಾಗಿಂಗ್ ವಿಚಾರವಾಗಿ ಅನಾಮಧೇಯ ದೂರುಗಳನ್ನು ಸ್ವೀಕರಿಸಿದ್ದೇವು. ಪ್ರಥಮ ವರ್ಷದ ವಿದ್ಯಾರ್ಥಿಗಳು ತಮ್ಮ ಮೇಲೆ ಹಿರಿಯ ವಿದ್ಯಾರ್ಥಿಗಳಿಂದ ಆಗುತ್ತಿರುವ ದೌರ್ಜನ್ಯದ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದರು. ಆದರೆ, ಭಯದಿಂದ ವಿದ್ಯಾರ್ಥಿಗಳು ತಮ್ಮ ಹೆಸರನ್ನು ಬಹಿರಂಗಪಡಿಸಿದೆ ದೂರನ್ನು ನೀಡಿದ್ದರು ಎಂದು ಹೇಳಿದ್ದಾರೆ.
ನಮಗೆ ಬಂದ ದೂರುಗಳನ್ನು ಆಧರಿಸಿ ನಾವು ಕ್ಯಾಂಪಸ್‌ಗೆ ಪರಿಶೀಲಿಸಲು ತೆರಳಿದೇವು. ಆದರೆ, ನಮ್ಮ ಸಮವಸ್ತ್ರ ನೋಡಿ ಹೆದರಿದ ವಿದ್ಯಾರ್ಥಿಗಳು ತಮ್ಮ ಸಮಸ್ಯೆಗಳನ್ನು ಹೇಳಲು ಮುಂದೆ ಬರಲಿಲ್ಲ. ದೂರು ನೀಡಿದ ವಿದ್ಯಾರ್ಥಿಗಳ ಮೊಬೈಲ್ ಸಂಖ್ಯೆಗಳನ್ನು ತೆಗೆದುಕೊಳ್ಳಲು ನಾವು ಪ್ರಯತ್ನಿಸಿದೇವು. ಆದರೆ, ಸಹಾಯವಾಣಿಯ ನಿಯಮಗಳು ಅದಕ್ಕೆ ಅವಕಾಶ ನೀಡಲಿಲ್ಲ ಎಂದು ಹೇಳಿದರು.
ಆದ್ದರಿಂದ ಶಾಲಿನಿ ಮತ್ತು ಇತರೆ ಕಾನ್‌ಸ್ಟೇಬಲ್‌ಗಳು ಸಿವಿಲ್ ಡ್ರೆಸ್‌ನಲ್ಲಿ ಕ್ಯಾಂಪಸ್‌ನಲ್ಲಿ ಸಮಯ ಕಳೆಯಲು ಮುಂದಾದರು. ಕ್ಯಾಂಟಿನ್ ಹಾಗೂ ಕಾಲೇಜಿನ ಬಳಿಯ ಟೀ ಸ್ಟಾಲ್ ಬಳಿ ವಿದ್ಯಾರ್ಥಿಗಳೊಂದಿಗೆ ಮಾತುಕತೆ ನಡೆಸುತ್ತಾ ಪ್ರಕರಣವನ್ನು ಭೇದಿಸಲು ಪ್ರಯತ್ನಿಸಿದರು. ಕಿರಿಯ ವಿದ್ಯಾರ್ಥಿಗಳೊಂದಿಗೆ ಪ್ರಕರಣದ ಅಂಶಗಳನ್ನು ಕೆದಕುತ್ತಾ ಸಾಗಿದಾಗ ಅವರಿಗೆ ಅನೇಕ ಭಯಾನಕ ಅಂಶಗಳು ಪತ್ತೆಯಾಗಿವೆ ಎಂದು ಕ್ವಾಜಿ ತಿಳಿಸಿದರು.