ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಹೊಸ ಸಂಕಷ್ಟ ಎದುರಾಗಿದೆ. ಕಳೆದ ವರ್ಷ ಜನವರಿ 6 ರಂದು ಅಮೆರಿಕ ಸಂಸತ್ತಿನಲ್ಲಿ ಸ್ಥಾಪಿಸಲಾದ ತನಿಖಾ ಸಮಿತಿಯು ಟ್ರಂಪ್ ವಿರುದ್ಧ ಹೊಸ ಕ್ರಿಮಿನಲ್ ಮೊಕದ್ದಮೆಗಳನ್ನು ದಾಖಲಿಸಲು ತಯಾರಿ ನಡೆಸುತ್ತಿದೆ. ತನಿಖಾ ಸಮಿತಿಯು ಟ್ರಂಪ್ ವಿರುದ್ಧದ ಮೂರು ಆರೋಪಗಳನ್ನು ಗಂಭೀರವಾಗಿ ಪರಿಗಣಿಸಿದೆ.
ಮುಂದಿನ ಸೋಮವಾರದೊಳಗೆ ಸಮಿತಿ ಈ ಕುರಿತು ಸಾರ್ವಜನಿಕವಾಗಿ ಶಿಫಾರಸು ಮಾಡಬಹುದು.
ಸರ್ಕಾರದ ವಿರುದ್ಧ ಸಂಚು ರೂಪಿಸುವ ಉದ್ದೇಶದಿಂದ ಮಾಡಿದ ದಂಗೆಗೆ ಸಂಬಂಧಿಸಿದಂತೆ ಕ್ರಿಮಿನಲ್ ಪ್ರಕರಣದಲ್ಲಿ ವಿಚಾರಣೆಗೆ ಶಿಫಾರಸು ಮಾಡಲು ಸಮಿತಿ ಮುಂದಾಗಿದೆ. ಒಟ್ಟು ಮೂರು ಹೊಸ ಆರೋಪಗಳನ್ನು ಸಮಿತಿ ಪರಿಗಣಿಸುತ್ತಿದೆ. ಈ ಬಗ್ಗೆ ಸುದೀರ್ಘ ಚರ್ಚೆ ನಡೆಸಿರೋ ಅಧಿಕಾರಿಗಳು, ಯಾವ ನಿರ್ದಿಷ್ಟ ಆರೋಪಗಳ ಆಧಾರದ ಮೇಲೆ ನ್ಯಾಯಾಂಗ ಇಲಾಖೆಗೆ ಕಳುಹಿಸುತ್ತಾರೆ ಎಂಬುದನ್ನು ಬಹಿರಂಗಪಡಿಸಿಲ್ಲ.
ಡೊನಾಲ್ಡ್ ಟ್ರಂಪ್ ವಿರುದ್ಧದ ಆರೋಪಗಳಲ್ಲಿ ದೇಶದ್ರೋಹ, ಅಧಿಕೃತ ಪ್ರಕ್ರಿಯೆಗಳಿಗೆ ಅಡ್ಡಿ ಮತ್ತು ಫೆಡರಲ್ ಸರ್ಕಾರವನ್ನು ವಂಚಿಸುವ ಪಿತೂರಿ ಸೇರಿವೆ. ಸಮಿತಿಯ ಉಪಾಧ್ಯಕ್ಷ ಲಿಜ್ ಚೆನಿ ಅಧ್ಯಕ್ಷತೆಯ 9 ಸದಸ್ಯರ ಸಮಿತಿಯು ಟ್ರಂಪ್ ವಿರುದ್ಧ ನಡೆಯುತ್ತಿರುವ ಪ್ರಕರಣಗಳ ಪುರಾವೆಗಳನ್ನು ನಿರಂತರವಾಗಿ ಸಂಗ್ರಹಿಸುತ್ತಿದೆ.