ಬೆಳಗಾವಿ: ಮಾಜಿ ಸಚಿವ ಜನಾರ್ದನ ರೆಡ್ಡಿ ಬಿಜೆಪಿಯಿಂದ ದೂರವಿರಲು ಯೋಚನೆ ಮಾಡಿಲ್ಲ ಎಂದು ಸಾರಿಗೆ ಸಚಿವ ಬಿ. ಶ್ರೀರಾಮುಲು ಹೇಳಿದ್ದಾರೆ. ಬೆಳಗಾವಿಯ ಬಸ್ತವಾಡದಲ್ಲಿ ಮಾತನಾಡಿದ ಶ್ರೀರಾಮುಲು, ಬಿಜೆಪಿಯಲ್ಲಿ ಹಿಂದಿನಿಂದಲೇ ಜನಾರ್ಧನ ರೆಡ್ಡಿ ಪ್ರಭಾವಿ ನಾಯಕರಾಗಿದ್ದಾರೆ ಎಂದರು.
ರಾಯಚೂರು ಜಿಲ್ಲೆಯ ಮಸ್ಕಿಯಲ್ಲಿ ಜನಾರ್ಧನ ರೆಡ್ಡಿ ಸಭೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಶ್ರೀರಾಮುಲು, ಮತ್ತೆ ರಾಜಕೀಯದಲ್ಲಿ ಸಕ್ರಿಯವಾಗಿ ಇರಬೇಕೆಂಬ ಬಯಕೆ ಅವರದ್ದಾಗಿದೆ. ಹಾಗಾಗಿ ಜನಾರ್ದನ ರೆಡ್ಡಿ ಪ್ರವಾಸ ಮಾಡುತ್ತಿದ್ದಾರೆ. ಈಗಾಗಲೇ ಕೇಂದ್ರದ ನಾಯಕರ ಗಮನಕ್ಕೆ ಜನಾರ್ಧನ ರೆಡ್ಡಿ ವಿಚಾರದ ಬಗ್ಗೆ ತಿಳಿಸಿದ್ದೇನೆ ಎಂದರು.
ಜನಾರ್ಧನ ರೆಡ್ಡಿ ಬಾಯಲ್ಲಿ ಸ್ಪರ್ಧೆ ಮತ್ತು ಪಕ್ಷ ಕಟ್ಟುತ್ತೇನೆ ಎನ್ನುವ ವಿಷಯ ಬಂದಿಲ್ಲ. ಕೆಲವು ಬಾರಿ ಅಸಮಾಧಾನ ಸರಿಪಡಿಸುವ ಕೆಲಸ ಮಾಡಿದ್ದೇನೆ. ಜನಾರ್ಧನ ರೆಡ್ಡಿ ಪತ್ನಿ ಚುನಾವಣೆಯಲ್ಲಿ ಸ್ಪರ್ಧಿಸುವ ವಿಚಾರ ನನಗೆ ಗೊತ್ತಿಲ್ಲ ಎಂದು ಶ್ರೀರಾಮುಲು ಹೇಳಿದ್ದಾರೆ.