ಬೆಳಗಾವಿ: ರಾಜ್ಯಾದ್ಯಂತ ಅವೈಜ್ಞಾನಿಕವಾಗಿ ನಿರ್ಮಿಸಿದ ರಸ್ತೆ ಉಬ್ಬು ತೆರವುಗೊಳಿಸಲು ತಕ್ಷಣವೇ ಕ್ರಮ ಕೈಗೊಳ್ಳುವುದಾಗಿ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಹೇಳಿದ್ದಾರೆ.
ವಿಧಾನಸಭೆಯಲ್ಲಿ ಶೂನ್ಯ ವೇಳೆಯಲ್ಲಿ ಜೆಡಿಎಸ್ ಶಾಸಕ ಎ.ಟಿ.
ರಾಮಸ್ವಾಮಿ ವಿಷಯ ಪ್ರಸ್ತಾಪಿಸಿದ್ದು, ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಸೇರಿದಂತೆ ಹಲವು ಶಾಸಕರು ಪಕ್ಷಾತೀತವಾಗಿ ದನಿಗೂಡಿಸಿದ್ದಾರೆ.
ರಾಷ್ಟ್ರೀಯ ಹೆದ್ದಾರಿಗಳ ಮಾದರಿಯಲ್ಲಿ ಶಾಲೆ, ಜನಸಂದಣಿ ಪ್ರದೇಶ, ಆಸ್ಪತ್ರೆಗಳ ಬಳಿ ವೈಜ್ಞಾನಿಕವಾಗಿ ರೋಡ್ ಹಂಪ್ಸ್ ಹಾಕಬೇಕು. ಉಳಿದಂತೆ ಎಲ್ಲಾ ಅವೈಜ್ಞಾನಿಕ ಹಂಪ್ಸ್ ಗಳನ್ನು ತೆರವುಗೊಳಿಸಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇದಕ್ಕೆ ಸರ್ಕಾರದ ಪರವಾಗಿ ಉತ್ತರ ನೀಡಿದ ಸಚಿವ ಗೋವಿಂದ ಕಾರಜೋಳ ಅವರು, ರಾಜ್ಯ ಹೆದ್ದಾರಿ, ಜಿಲ್ಲಾ ರಸ್ತೆ ಸೇರಿದಂತೆ ಎಲ್ಲಾ ರಸ್ತೆಗಳಲ್ಲಿ ನಿರ್ಮಿಸಿದ ರಸ್ತೆ ಉಬ್ಬುಗಳಿಂದ ಅಪಘಾತ, ಸಾವು, ನೋವು ಸಂಭವಿಸುತ್ತಿದ್ದು, ಈ ಹಿನ್ನೆಲೆಯಲ್ಲಿ ಅವೈಜ್ಞಾನಿಕವಾಗಿ ನಿರ್ಮಿಸಲಾದ ಎಲ್ಲಾ ಹಂಪ್ಸ್ ಗಳನ್ನು ತೆರವುಗೊಳಿಸಲಾಗುವುದು ಎಂದು ಹೇಳಿದ್ದಾರೆ.
ರೋಡ್ ಹಂಪ್ಸ್ ಹಾಕದಂತೆ ಸುಪ್ರೀಂ ಕೋರ್ಟ್ ಆದೇಶವೂ ಇದೆ. ಸ್ಥಳೀಯರ ಒತ್ತಡದ ಅನ್ವಯ ಅಧಿಕಾರಿಗಳು ಗುತ್ತಿಗೆದಾರರು ಹಂಪ್ಸ್ ಹಾಕುತ್ತಿದ್ದಾರೆ. ಎಲ್ಲಾ ಅವಜ್ಞಾನಿಕ ರೋಡ್ ಹಂಪ್ಸ್ ತೆರವುಗೊಳಿಸಿ ಅಗತ್ಯವಿರುವ ಕಡೆ ವೈಜ್ಞಾನಿಕ ರೋಡ್ ಹಂಪ್ಸ್ ನಿರ್ಮಿಸಲು ಅಧಿಕಾರಿಗಳಿಗೆ ಸೂಚಿಸುವುದಾಗಿ ಹೇಳಿದ್ದಾರೆ.