ಹುಬ್ಬಳ್ಳಿ: ರಾಜ್ಯಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಭೇಟಿ ವಿಚಾರವಾಗಿ ವ್ಯಂಗ್ಯವಾಡಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಚುನಾವಣೆ ಬಂದಾಗ ರಾಜ್ಯಕ್ಕೆ ಬರುತ್ತಾರೆ. ಬಳಿಕ ಹೋಗುತ್ತಾರೆ. ರಾಜ್ಯಕ್ಕೆ ನ್ಯಾಯ ಕೊಡುವ ಕೆಲಸವನ್ನು ಮಾಡುವುದಿಲ್ಲ ಎಂದು ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ.ಶಿವಕುಮಾರ್, ಸಮಾಜದಲ್ಲಿ ಶಾಂತಿ, ನೆಮ್ಮದಿ ತರಲು, ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ನ್ಯಾಯ ಒದಗಿಸಲು, ಸುಭದ್ರ ಹಾಗೂ ಭ್ರಷ್ಟಾಚಾರ ರಹಿತ ಆಡಳಿತ ನೀಡುವ ವಾಗ್ದಾನದೊಂದಿಗೆ ಕಾಂಗ್ರೆಸ್ ಜನವರಿ 11 ಬೆಳಗಾವಿ ವೀರಸೌಧದಿಂದ ಯಾತ್ರೆ ಆರಂಭಿಸಲಿದೆ ಎಂದು ಹೆಳಿದರು.
ಕರ್ನಾಟಕ-ಮಹಾರಾಷ್ಟ್ರ ಗಡಿ ವಿಚಾರವಾಗಿ ರಾಜ್ಯಕ್ಕೆ ಆಗಮಿಸಿರುವ ಕೇಂದ್ರ ಗೃಹ ಸಚಿವರು ಸ್ಪಷ್ಟನೆ ನೀಡಲಿ. ರಾಜ್ಯದಲ್ಲಿ ಮೀಸಲಾತಿ ಹೆಸರಲ್ಲಿ ಗೊಂದಲ ನಿರ್ಮಾಣ ಮಾಡುತ್ತಿದ್ದಾರೆ. ಸಮುದಾಯಗಳ ಬೇಡಿಕೆಗೆ ಅನುಗುಣವಾಗಿ ಮೀಸಲಾತಿ ನೀಡದೇ ಮೀಸಲಾತಿ ವಿಚಾರ ನ್ಯಾಯಾಲಯದ ಮೆಟ್ಟಿಲೇರಿ ಅಲ್ಲಿ ಬಾಕಿ ಉಳಿಯುವಂತೆ ಮಾಡುತ್ತಿದ್ದಾರೆ. ಅನಗತ್ಯವಾಗಿ ವಿವಾದಗಳಿಗೆ ಬಿಜೆಪಿಯವರು ದಾರಿ ಮಾಡಿಕೊಡುತಿದ್ದಾರೆ. ಯಾವ ವಿಚಾರದಲ್ಲಿಯೂ ಸ್ಪಷ್ಟ ನಿರ್ಧಾರ ಪ್ರಕಟಿಸದೇ ಗೊಂದಲವನ್ನು ಸೃಷ್ಟಿಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.