ಒಟ್ಟಾವ: ಕೆನಡಾದಲ್ಲಿ ವಿದೇಶೀಯರು ಮನೆ ಕೊಳ್ಳುವುದಕ್ಕೆ ಅಲ್ಲಿನ ಸರ್ಕಾರ ವಿಧಿಸಿರುವ ನಿಷೇಧ ಜ.1ರಿಂದಲೇ ಜಾರಿಯಾಗಿದೆ. ವಿದೇಶೀಯರಿಗೆ ಮನೆಗಳನ್ನು ಕೊಳ್ಳುವುದಕ್ಕೆ ಅವಕಾಶ ನೀಡಿರುವ ಪರಿಣಾಮ, ಸ್ವದೇಶೀಯರಿಗೆ ಮನೆಗಳು ಸಿಗದ ಮಟ್ಟಕ್ಕೆ ಬೆಲೆಗಳು ಏರಿಕೆಯಾಗಿದ್ದು, ಇದನ್ನು ಮನಗಂಡು ಸರ್ಕಾರ ಈ ನಿರ್ಧಾರ ಮಾಡಿದೆ.
ನಿಷೇಧವಿರುವುದು ನಗರದಲ್ಲಿರುವ ಮನೆಗಳನ್ನು ಕೊಳ್ಳುವುದಕ್ಕೆ ಮಾತ್ರ. ಆದರೆ ಬೇಸಿಗೆ ಕಾಲದ ಮನರಂಜನಾ ನಿವಾಸಗಳನ್ನು ಕೊಳ್ಳುವುದಕ್ಕೆ ಈಗಲೂ ಅವಕಾಶ ನೀಡಲಾಗಿದೆ. ಆದರೆ ನಿರಾಶ್ರಿತರು, ಕೆನಡಾ ಪ್ರಜೆಗಳಲ್ಲದಿದ್ದರೂ ಇಲ್ಲೇ ಶಾಶ್ವತವಾಗಿ ವಾಸಿಸುವ ವ್ಯಕ್ತಿಗಳಿಗೆ ಮನೆ ಕೊಳ್ಳಲು ಅವಕಾಶ ನೀಡಲಾಗಿದೆ.
ಕೆನಡಾದಲ್ಲಿ ಮನೆಗಳನ್ನು ಕೊಳ್ಳುವುದಕ್ಕೆ ಬಹಳ ಬೇಡಿಕೆಯಿರುವುದನ್ನು ಲಾಭಕೋರರು, ಶ್ರೀಮಂತ ಕಂಪನಿಗಳು, ವಿದೇಶಿ ಹೂಡಿಕೆದಾರರು ಬಳಸಿಕೊಳ್ಳುತ್ತಿದ್ದಾರೆ. ಅದರ ಪರಿಣಾಮ ಕಡಿಮೆ ಬಳಕೆಯಾಗುತ್ತಿರುವ, ಖಾಲಿಖಾಲಿಯಾಗಿರುವ ಮನೆಗಳು ಹುಟ್ಟಿಕೊಂಡಿದ್ದು, ಬೆಲೆಗಳು ಗಗನಕ್ಕೇರಿವೆ.