ಉಗ್ರಗಾಮಿ ಸಂಘಟನೆ ಸ್ಥಾಪಿಸಲು ಯತ್ನಿಸಿದ ಆರೋಪದ ಮೇಲೆ ಅಸ್ಸಾಂನ ಮಾಜಿ ಶಾಸಕ ಹಿತೇಶ್ ಸೇರಿದಂತೆ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಕೊಕ್ರಜಾರ್ ಜಿಲ್ಲೆಯ ಮಾಜಿ ಶಾಸಕ ಹಿತೇಶ್ ಬಸುಮತರಿ ಅವರ ಮೇಲೆ ಗುಮಾನಿ ಇದ್ದ ಹಿನ್ನೆಲೆಯಲ್ಲಿ ಪೊಲೀಸರು ಅವರ ನಿವಾಸದ ಮೇಲೆ ಶೋಧ ಕಾರ್ಯ ನಡೆಸಿದ್ದರು.
ಈ ವೇಳೆ ಒಂದು ಎಕೆ 47 ಮತ್ತು ಒಂದು ಎಂ16 ರೈಫಲ್ ಹಾಗೂ 100 ಜೀವಂತ ಕಾಟ್ರಿಡ್ಜ್‌ಗಳು ಪತ್ತೆಯಾಗಿವೆ.
ಘಟನೆಯಲ್ಲಿ ಮಾಜಿ ಶಾಸಕ ಸೇರಿದಂತೆ ಮೂವರನ್ನು ಬಂಧಿಸಲಾಗಿದ್ದು, ಅವರ ವಿಚಾರಣೆ ನಡೆಯುತ್ತಿದೆ. ಈ ಮೂವರು ಹೊಸ ಭಯೋತ್ಪಾದಕ ಸಂಘಟನೆಯನ್ನು ಸ್ಥಾಪಿಸಲು ಸಂಚು ರೂಪಿಸುತ್ತಿದ್ದರು. ಅದರ ಆಧಾರದ ಮೇಲೆ ಅವರನ್ನು ಬಂಧಿಸಲಾಗಿದೆ ಎಂದು ಕೋಕ್ರಜಾರ್ ಪೊಲೀಸ್ ಅಧೀಕ್ಷಕ ಪುಷ್ಪರಾಜ್ ಸಿಂಗ್ ತಿಳಿಸಿದ್ದಾರೆ.
“ನಾವು ಆರೋಪಿಗಳನ್ನು ಸ್ಥಳೀಯ ನ್ಯಾಯಾಲಯಕ್ಕೆ ಹಾಜರುಪಡಿಸಿ, ಹೆಚ್ಚಿನ ವಿಚಾರಣೆಗಾಗಿ ಐದು ದಿನಗಳ ಪೊಲೀಸ್ ಕಸ್ಟಡಿಗೆ ಪಡೆದಿದ್ದೇವೆ” ಎಂದು ಮಾಹಿತಿ ನೀಡಿದ್ದಾರೆ.