ಬೆಳಗಾವಿ: ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರಿಗೆ ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿದ್ದ ಕೈದಿ ಜೀವ ಬೆದರಿಕೆ ಹಾಕಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೈದಿಯ ಹಿನ್ನೆಲೆ ಬಗ್ಗೆ ಮಾಹಿತಿ ಲಭ್ಯವಾಗಿದೆ.
ಕೇಂದ್ರ ಸಚಿವರಿಗೆ ಬೆದರಿಕೆ ಹಾಕಿದ್ದು, ಹಿಂಡಲಗಾ ಜೈಲು ಪಾಲಾಗಿರುವ ಕೈದಿ ಮಂಗಳೂರು ಮೂಲದ ಜಯೇಶ್ ಪೂಜಾರಿ ಎಂದು ತಿಳಿದುಬಂದಿದೆ.
ಕೊಲೆ ಹಾಗೂ ದರೋಡೆ ಪ್ರಕರಣದಲ್ಲಿ ಮರಣ ದಂಡನೆಗೆ ಗುರಿಯಾಗಿರುವ ಜಯೇಶ್ ಪೂಜಾರಿ ಈ ಹಿಂದೆ ಎಡಿಜಿಪಿ ಅಲೋಕ್ ಕುಮಾರ್ ಅವರಿಗೂ ಬೆದರಿಕೆ ಹಾಕಿದ್ದ ಎಂದು ತಿಳಿದುಬಂದಿದೆ.
ಕಡಬಾ ತಾಲೂಕಿನ ಶಿರಾಡಿ ನಿವಾಸಿಯಾಗಿರುವ ಜಯೇಶ್ ಪೂಜಾರಿ 2008ರಲ್ಲಿ ಉಪ್ಪಿನಂಗಡಿ ಠಾಣಾ ವ್ಯಾಪ್ತಿಯಲ್ಲಿ ನಡೆದ ಕೊಲೆ ಹಾಗೂ ದರೋಡೆ ಪ್ರಕರಣದಲ್ಲಿ ಜೈಲು ಸೇರಿದ್ದ. 2016ರ ಆಗಸ್ಟ್ 12ರಂದು ಮಂಗಳೂರು ಸೆಷನ್ಸ್ ಕೋರ್ಟ್ ಜಯೇಶ್ ಗೆ ಮರಣದಂಡನೆ ವಿಧಿಸಿತ್ತು. 2017ರಲ್ಲಿ ಮರಣದಂಡನೆ ಶಿಕ್ಷೆ ಜೀವಾವಧಿ ಶಿಕ್ಷೆಯಾಗಿ ಮಾರ್ಪಾಡಾಗಿತ್ತು.
2018ರಲ್ಲಿ ಅಂದು ಉತ್ತರ ವಲಯ ಐಜಿಪಿಯಾಗಿದ್ದ ಇಂದಿನ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಎಡಿಜಿಪಿಯಾಗಿರುವ ಅಲೋಕ್ ಕುಮಾರ್ ಅವರಿಗೂ ಕರೆ ಮಾಡಿ ಜೀವ ಬೆದರಿಕೆ ಹಾಕಿದ್ದ. 2019ರಂದು ಮೈಸೂರು ಜೈಲಿಗೆ ಸ್ಥಳಾಂತರಗೊಂಡಿದ್ದ ಜಯೇಶ್ ಪೂಜಾರಿ, 2021ರ ಸೆಪ್ಟೆಂಬರ್ 14ರಂದು ಮತ್ತೆ ಬೆಳಗಾವಿ ಹಿಂಡಲಗಾ ಜೈಲಿಗೆ ಸ್ಥಳಾಂತರಗೊಂಡಿದ್ದ.
ಕೇಂದ್ರ ಸಚಿವ ನಿತಿನ್ ಗಡ್ಕರಿಗೆ ಬೆದರಿಕೆ ಹಾಕಿದ ಪ್ರಕರಣ ಸಂಬಂಧ, ಕೈದಿ ಜಯೇಶ್ ನನ್ನು ಎಟಿಎಸ್ ಅಧಿಕಾರಿಗಳು ವಿಚಾರಣೆಗೊಳಪಡಿಸಿದ್ದಾರೆ ಎಂದು ತಿಳಿದುಬಂದಿದೆ.