ಬೆಂಗಳೂರು: ವಿಚ್ಚೇದಿತ ಪತ್ನಿಯ ಜೀವನಾಂಶ ಮೊತ್ತವನ್ನು ಹೈಕೋರ್ಟ್ 40 ಲಕ್ಷ ರೂಪಾಯಿಗೆ ಹೆಚ್ಚಳ ಮಾಡಿ ಆದೇಶ ಹೊರಡಿಸಿದೆ.
ವಿಚ್ಛೇದಿತ ಪತ್ನಿಯ ಜೀವನ ನಿರ್ವಹಣೆ ಮತ್ತು ಆಕೆಯ ಸುಪರ್ದಿಯಲ್ಲಿರುವ ಎರಡನೇ ಪುತ್ರನ ವೃತ್ತಿಪರ ಕೋರ್ಸ್ ವ್ಯಾಸಂಗದ ವೆಚ್ಚವನ್ನು ಪರಿಗಣಿಸಿ ಪತ್ನಿಗೆ ನಿಗದಿಪಡಿಸಿದ್ದ 25 ಲಕ್ಷ ರೂಪಾಯಿ ಶಾಶ್ವತ ಜೀವನಾಂಶ ಮೊತ್ತವನ್ನು 40 ಲಕ್ಷ ರೂಪಾಯಿಗೆ ಹೆಚ್ಚಳ ಮಾಡಿ ಹೈಕೋರ್ಟ್ ಆದೇಶ ಹೊರಡಿಸಿದೆ.
ದಕ್ಷಿಣ ಕನ್ನಡ ಜಿಲ್ಲೆಯ ವಿಚ್ಛೇದಿತ ದಂಪತಿ ಸಲ್ಲಿಸಿದ ಪ್ರತ್ಯೇಕ ಮೇಲ್ಮನವಿಗಳ ವಿಚಾರಣೆ ಹಿರಿಯ ನ್ಯಾಯಮೂರ್ತಿ ಅಲೋಕ್ ಅರಾಧೆ ನೇತೃತ್ವದ ವಿಭಾಗಿಯ ಪೀಠದಲ್ಲಿ ನಡೆದಿದೆ. ಪ್ರಕರಣದಲ್ಲಿ ಮೇಲ್ಮನವಿದಾರರ ಮೊದಲ ಪುತ್ರ ಮುಂಬೈ ಐಐಟಿಯಲ್ಲಿ ಇಂಜಿನಿರಿಂಗ್ ಓದುತ್ತಿದ್ದು, ಶಿಕ್ಷಣಕ್ಕಾಗಿ 26.50 ಲಕ್ಷ ರೂಪಾಯಿ ವ್ಯಯಿಸಲಾಗುತ್ತಿದೆ. ಎರಡನೇ ಮಗ ಸದ್ಯ ಪತ್ನಿಯ ಸುಪರ್ದಿಯಲ್ಲಿದ್ದು, 9ನೇ ತರಗತಿ ಓದುತ್ತಿದ್ದಾನೆ. ಆತನ ವೃತ್ತಿಪರ ಕೋರ್ಸ್ ವ್ಯಾಸಂಗ ಮಾಡಲು ಇನ್ನೂ ಮೂರು ವರ್ಷ ಅಗತ್ಯವಿದ್ದು, ಮೊದಲನೇ ಮಗನ ವ್ಯಾಸಂಗ ವೆಚ್ಚದ ಜವಾಬ್ದಾರಿ ಹೊತ್ತಿರುವಾಗ ಎರಡನೇ ಪುತ್ರನ ಶಿಕ್ಷಣದ ಖರ್ಚು ಕೂಡ ತಂದೆಯೇ ಹೊರಬೇಕಾಗುತ್ತದೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
ಎರಡನೇ ಪುತ್ರನ ವೃತ್ತಿಪರ ಕೋರ್ಸ್ ವ್ಯಾಸಂಗದ ವೆಚ್ಚ ಪರಿಗಣಿಸಿ ಪತ್ನಿಗೆ ನಿಗದಿಪಡಿಸಿದ್ದ 25 ಲಕ್ಷ ರೂ. ಶಾಶ್ವತ ಜೀವನಾಂಶ ಮೊತ್ತವನ್ನು 40 ಲಕ್ಷ ರೂಪಾಯಿಗೆ ಹೆಚ್ಚಳ ಮಾಡಿ ಹೈಕೋರ್ಟ್ ವಿಭಾಗಿಯ ಪೀಠ ಆದೇಶ ನೀಡಿದೆ.