ಬೆಂಗಳೂರು: ರಾಜ್ಯದ ಸರ್ಕಾರಿ ಪದವಿ ಕಾಲೇಜುಗಳಿಗೆ 2021 -22ನೇ ಸಾಲಿನಲ್ಲಿ ನೇಮಕ ಮಾಡಿಕೊಳ್ಳಲಾಗಿದ್ದ ಎಲ್ಲಾ ಅತಿಥಿ ಉಪನ್ಯಾಸಕರನ್ನು ಸೇವೆಯಿಂದ ಬಿಡುಗಡೆ ಮಾಡಿ 2022 -23ನೇ ಸಾಲಿಗೆ ಹೊಸದಾಗಿ ಅತಿಥಿ ಉಪನ್ಯಾಸಕರನ್ನು ನೇಮಕಾತಿ ಮಾಡಿಕೊಳ್ಳಲು ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಪ್ರಾಂಶುಪಾಲರಿಗೆ ಸೂಚನೆ ನೀಡಿದೆ.
ಕೌನ್ಸೆಲಿಂಗ್ ವೇಳಾಪಟ್ಟಿ ಪ್ರಕಟಿಸಲಾಗಿದ್ದು, 2022 -23ನೇ ಸಾಲಿಗೆ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳ ತಾತ್ಕಾಲಿಕ ಮೆರಿಟ್ ಪಟ್ಟಿ ಪ್ರಕಟಿಸಲಾಗಿದೆ. ಫೆಬ್ರವರಿ 3ರಂದು ಅಂತಿಮ ಮೆರಿಟ್ ಪಟ್ಟಿ ಮತ್ತು ಕಾರ್ಯಭಾರದ ಮಾಹಿತಿ ಪ್ರಕಟಿಸಬೇಕಿದೆ. ಫೆಬ್ರವರಿ 4ರಿಂದ 8ರವರೆಗೆ ಅಂತಿಮ ಮೆರಿಟ್ ಪಟ್ಟಿಯ ಅನ್ವಯ ವಿಷಯವಾರು ಆನ್ಲೈನ್ ಕೌನ್ಸೆಲಿಂಗ್ ಪ್ರಕ್ರಿಯೆ ನಡೆಸಿ ಫೆಬ್ರವರಿ 9 ರಂದು ಆಯ್ಕೆ ಪಟ್ಟಿ ಪ್ರಕಟಿಸಬೇಕು. ಹೆಚ್ಚುವರಿ ಕಾರ್ಯಭಾರಕ್ಕೆ ಅನುಗುಣವಾಗಿ ನೇಮಕಾತಿ ಮಾಡಿಕೊಳ್ಳಬೇಕು. ಆಯ್ಕೆಯಾದ ಅಭ್ಯರ್ಥಿಗಳು ಫೆಬ್ರವರಿ 10 ರಿಂದ ಕಾಲೇಜುಗಳಲ್ಲಿ ಕರ್ತವ್ಯಕ್ಕೆ ಹಾಜರಾಗಬೇಕು ಎಂದು ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಆಯುಕ್ತರು ಸುತ್ತೋಲೆ ಹೊರಡಿಸಿದ್ದಾರೆ.
ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ತಾವು ಸಲ್ಲಿಸಿರುವ ಮಾಹಿತಿಯಲ್ಲಿ ಯಾವುದೇ ತಪ್ಪುಗಳಿದ್ದಲ್ಲಿ ಫೆಬ್ರವರಿ 2ರ ಸಂಜೆ 5 ಗಂಟೆಯೊಳಗೆ ತಿದ್ದುಪಡಿ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ. ನಂತರ ಯಾವುದೇ ತಿದ್ದುಪಡಿ ಮನವಿ ಪರಿಗಣಿಸುವುದಿಲ್ಲ. ಆಯ್ಕೆಗೆ ಸಂಬಂಧಿಸಿದ ಎಲ್ಲಾ ಮಾಹಿತಿಗಳನ್ನು https://dce.karnataka.gov.in ನಲ್ಲಿ ಪ್ರಕಟಿಸುವಂತೆ ಸೂಚಿಸಲಾಗಿದೆ.