ನವದೆಹಲಿ: ಬೇಸಿಕ್ ವೀಲ್ ಚೇರ್ ಇಲ್ಲ, ಚೆನ್ನೈ ವಿಮಾನ ನಿಲ್ದಾಣದಲ್ಲಿ 30 ನಿಮಿಷ ಕಾಯಬೇಕಾಯ್ತು ಎಂದು ಏರ್ ಇಂಡಿಯಾ ವಿರುದ್ಧ ನಟಿ, ರಾಜಕಾರಣಿ ಖುಷ್ಬೂ ಸುಂದರ್ ವಾಗ್ದಾಳಿ ನಡೆಸಿದ್ದಾರೆ.
ಖುಷ್ಬೂ ಸುಂದರ್ ಅವರು ಮಂಗಳವಾರ ಏರ್ ಇಂಡಿಯಾವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಮೊಣಕಾಲು ಗಾಯದ ಪ್ರಯಾಣಿಕರಿಗೆ ಗಾಲಿಕುರ್ಚಿ ಸೌಲಭ್ಯವಿಲ್ಲ. ಗಾಲಿಕುರ್ಚಿ ಸೌಕರ್ಯದ ಕೊರತೆಯಿಂದಾಗಿ ಚೆನ್ನೈ ವಿಮಾನ ನಿಲ್ದಾಣದಲ್ಲಿ ಅರ್ಧ ಗಂಟೆ ಕಾಯಬೇಕಾಯಿತು. ಏರ್ ಇಂಡಿಯಾ ಮತ್ತೊಂದು ಏರ್ ಲೈನ್ಸ್ ನಿಂದ ಗಾಲಿಕುರ್ಚಿಯನ್ನು ವ್ಯವಸ್ಥೆ ಮಾಡಲು ತಾನು 30 ನಿಮಿಷಗಳ ಕಾಲ ಕಾಯಬೇಕಾಯಿತು ಎಂದು ಅವರು ಹೇಳಿದ್ದಾರೆ.
ಪ್ರಿಯ ಏರ್ ಇಂಡಿಯಾ, ನಿಮ್ಮ ಬಳಿ ಮೊಣಕಾಲು ಗಾಯದ ಪ್ರಯಾಣಿಕರನ್ನು ಕರೆದೊಯ್ಯಲು ಮೂಲಭೂತ ಗಾಲಿಕುರ್ಚಿ ಇಲ್ಲ. ಅವರು ನನ್ನನ್ನು ಕರೆದೊಯ್ಯಲು ಮತ್ತೊಂದು ಏರ್‌ಲೈನ್‌ನಿಂದ ಗಾಲಿಕುರ್ಚಿಯನ್ನು ಎರವಲು ಪಡೆಯುವ ಮೊದಲು ನೋವಿನಲ್ಲೂ ನಾನು ಚೆನ್ನೈ ವಿಮಾನ ನಿಲ್ದಾಣದಲ್ಲಿ 30 ನಿಮಿಷ ಕಾಯಬೇಕಾಯಿತು. ನೀವು ವ್ಯವಸ್ಥೆ ಉತ್ತಮಪಡಿಸಿ. ಈ ಬಗ್ಗೆ ನನಗೆ ಖಾತ್ರಿಯಿದೆ ಎಂದು ಟ್ವೀಟ್ ಮಾಡಿದ್ದಾರೆ.
ಏರ್ ಇಂಡಿಯಾದ ಅನಾನುಕೂಲತೆಗಾಗಿ ಖುಷ್ಬೂ ಸುಂದರ್ ಗೆ ಕ್ಷಮೆಯಾಚಿಸಿ ಟ್ವೀಟ್ ಮಾಡಿದ್ದು, ಆತ್ಮೀಯ ಮೇಡಮ್, ಘಟನೆ ಬಗ್ಗೆ ವಿಷಾದಿಸುತ್ತೇವೆ. ನಾವು ತಕ್ಷಣವೇ ಕ್ರಮಕೈಗೊಂಡಿದ್ದೇವೆ ಎಂದು ತಿಳಿಸಿದೆ.
ಏರ್ ಇಂಡಿಯಾ ವಿಮಾನಗಳಲ್ಲಿ ಪ್ರಯಾಣಿಕರ ಅಶಿಸ್ತಿನ ವರ್ತನೆಯ ಮೂರು ಘಟನೆಗಳ ಬೆನ್ನಲ್ಲೇ ಖುಷ್ಬೂ ಸುಂದರ್ ಅವರಿಂದ ಆರೋಪ ಕೇಳಿಬಂದಿರುವುದು ಗಮನಿಸಬೇಕಾದ ಸಂಗತಿ.