Spread the love

ವದೆಹಲಿ: 2012 ರಲ್ಲಿ ನಡೆದಿದ್ದ ಚಾವ್ಲಾ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್​ನಿಂದ ಖುಲಾಸೆಗೊಂಡಿದ್ದ ವ್ಯಕ್ತಿಯೊಬ್ಬ ಮತ್ತೊಂದು ಕೊಲೆ ಕೇಸ್​ನಲ್ಲಿ ಸಿಕ್ಕಿಬಿದ್ದಿರುವ ಘಟನೆ ದೆಹಲಿಯಲ್ಲಿ ನಡೆದಿದೆ.

ಅತ್ಯಾಚಾರ ಆರೋಪಿಯಾಗಿದ್ದ ವಿನೋದ್​ ಹಾಗೂ ಇನ್ನೋರ್ವ ಪವನ್​ ಎಂಬಾತ ದೆಹಲಿಯ ದ್ವಾರಕಾದಲ್ಲಿ ನಡೆದ ಆಟೋರಿಕ್ಷಾ ಚಾಲಕನ ಹತ್ಯೆ ಪ್ರಕರಣದಲ್ಲಿ ಸಿಕ್ಕಿಬಿದ್ದಿದ್ದಾರೆ.

ಮುನಿರ್ಕಾ ನಿವಾಸಿ 44 ವರ್ಷದ ಅನಾರ್ ಸಿಂಗ್ ಎಂಬುವರನ್ನು ಜನವರಿ 26ರಂದು ದ್ವಾರಕಾದ ಸೆಕ್ಟರ್ 13ರಲ್ಲಿ ಇರಿದು ಹತ್ಯೆ ಮಾಡಲಾಗಿತ್ತು. ಇದಕ್ಕೆ ಸಂಬಂಧಿಸಿದಂತೆ ಈ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.

ಆರೋಪಿಗಳ ವಿಚಾರಣೆ ನಡೆಸಿದ್ದಾಗ, ಆಟೋರಿಕ್ಷಾ ಹತ್ತಿದ ಬಳಿಕ ದ್ವಾರಕಾ ತಲುಪಿದಾಗ ಚಾಲಕನ ದರೋಡೆಗೆ ಯತ್ನಿಸಿದ್ದು, ಆಟೋ ಚಾಲಕ ಪ್ರತಿರೋಧ ತೋರಿದಾಗ ಚಾಕುವಿನಿಂದ ಇರಿದು ಪರಾರಿಯಾಗಿರುವುದಾಗಿ ಹೇಳಿದ್ದಾರೆ.

ಈ ಆರೋಪಿಗಳ ಪೈಕಿ ವಿನೋದ್ ಎಂಬಾತ ಇತ್ತೀಚೆಗೆ ಜೈಲಿನಿಂದ ಬಿಡುಗಡೆಯಾಗಿದ್ದನು. ಚಾವ್ಲಾ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಸುಮಾರು 10 ವರ್ಷಗಳ ಕಾಲ ಜೈಲಿನಲ್ಲಿದ್ದನು. 2012ರಲ್ಲಿ ದೆಹಲಿಯ ಚಾವ್ಲಾದಲ್ಲಿ 19 ವರ್ಷದ ಯುವತಿಯ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಮೂವರು ಅಪರಾಧಿಗಳನ್ನು ಸುಪ್ರೀಂ ಕೋರ್ಟ್ ಖುಲಾಸೆಗೊಳಿಸಿತ್ತು.

ಅಪಹರಣದ ಮೂರು ದಿನಗಳ ನಂತರ ಯುವತಿಯ ದೇಹ ಪತ್ತೆಯಾಗಿತ್ತು. ಯುವತಿ ಗುರುಗ್ರಾಮದ ಸೈಬರ್ ಸಿಟಿ ಪ್ರದೇಶದಲ್ಲಿ ಕೆಲಸ ಮಾಡುತ್ತಿದ್ದು, ಉತ್ತರಾಖಂಡದ ನಿವಾಸಿಯಾಗಿದ್ದರು.


Spread the love

By admin