ಬಾಲಿವುಡ್ ನಟಿ ರಾಖಿ ಸಾವಂತ್ ತಮ್ಮ ಚಿತ್ರಗಳಿಗಿಂತ ವಿವಾದಗಳ ಮೂಲಕವೇ ಸದಾ ಸುದ್ದಿಯಲ್ಲಿರುತ್ತಾರೆ. ವಿವಾದಾತ್ಮಕ ಹೇಳಿಕೆಗಳನ್ನು ನೀಡುವುದರಲ್ಲೂ ರಾಖಿ ಸಾವಂತ್ ಮುಂದಿದ್ದು, ಇದೀಗ ತಮ್ಮ ವೈಯಕ್ತಿಕ ಬದುಕಿನ ಕಾರಣಕ್ಕೆ ಮತ್ತೊಮ್ಮೆ ಮುನ್ನೆಲೆಗೆ ಬಂದಿದ್ದಾರೆ.
ಹೌದು, ರಾಖಿ ಸಾವಂತ್ ಮೈಸೂರು ಮೂಲದ ಆದಿಲ್ ಜೊತೆ ವೈವಾಹಿಕ ಬದುಕಿಗೆ ಕಾಲಿಟ್ಟಿದ್ದು, ಆರಂಭದ ದಿನಗಳಲ್ಲಿ ಈ ಜೋಡಿ ಎಲ್ಲಿಗೆ ಹೋದರೂ ಒಟ್ಟಿಗೆ ಕಾಣಿಸಿಕೊಳ್ಳುತ್ತಿತ್ತು. ಅಲ್ಲದೆ ಪತಿ ತನಗೆ ನೀಡಿದ ಐಷಾರಾಮಿ ಕಾರ್ ಸೇರಿದಂತೆ ವಿವಿಧ ಗಿಫ್ಟ್ ಗಳ ಕುರಿತು ರಾಖಿ ಸಾವಂತ್ ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದರು.
ಆದರೆ ಕಾಲ ಸರಿದಂತೆ ದಂಪತಿ ನಡುವೆ ಬಿರುಕು ಬಿಟ್ಟಿದ್ದು, ಈ ವೇಳೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ್ದ ರಾಖಿ ಸಾವಂತ್ ಗೋಳೋ ಎಂದು ಅತ್ತಿದ್ದರು. ಆದಿಲ್ ನನ್ನು ನನ್ನಿಂದ ದೂರ ಮಾಡಲು ಕೆಲವರು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ್ದರು.
ಇದೀಗ ಇವರಿಬ್ಬರೂ ಸಂಪೂರ್ಣವಾಗಿ ಸಂಬಂಧ ಕಡಿದುಕೊಂಡಿರುವುದು ಖಚಿತವಾಗಿದೆ. ಈ ವಿಷಯವನ್ನು ಸ್ವತಃ ರಾಖಿ ಸಾವಂತ್ ಖಚಿತಪಡಿಸಿದ್ದಾರೆ. ತಾವಿಬ್ಬರು ಬಹು ಹಿಂದೆಯೇ ಮದುವೆಯಾಗಿದ್ದರೂ ಸಹ ಆದಿಲ್ ಕಾರಣಕ್ಕೆ ಎಂಟು ತಿಂಗಳ ಕಾಲ ಇದನ್ನು ಮುಚ್ಚಿಟ್ಟಿದ್ದೆ ಎಂದು ಹೇಳಿದ್ದಾರೆ.
ಇನ್ನು ಆದಿಲ್ ಕೂಡ ಈ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ್ದು, ರಾಖಿ ಸಾವಂತ್ ನನ್ನೊಂದಿಗೆ ಅನುಚಿತವಾಗಿ ವರ್ತಿಸಿದ್ದಾಳೆ. ನಾನು ಈವರೆಗೆ ಮಾತನಾಡಲಿಲ್ಲ ಎಂಬ ಕಾರಣಕ್ಕೆ ತಪ್ಪು ಮಾಡಿದ್ದೇನೆ ಎಂದು ಅರ್ಥವಲ್ಲ ಎಂದು ತಿಳಿಸಿದ್ದಾರೆ.