ಬೆಂಗಳೂರು: ಪೊಲೀಸರು ಎಂದು ಹೇಳಿಕೊಂಡು ಚಿನ್ನಾಭರಣ ವ್ಯಾಪಾರಿಯಿಂದ 6 ಲಕ್ಷ ರೂಪಾಯಿ ನಗದು ಹಾಗೂ ಚಿನ್ನದ ಬಿಸ್ಕತ್ ದೋಚಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಫೆಬ್ರವರಿ 7 ರಂದು ಪೊಲೀಸರ ಸೋಗಿನಲ್ಲಿ ಬಂದಿದ್ದ ಮೂವರು ಖದೀಮರು ತಮಿಳುನಾಡು ಮೂಲದ ಚಿನ್ನದ ವ್ಯಾಪಾರಿ ಉಪೇಂದ್ರನಾಥ್ ಅವರ ಬಳಿ ಕೆಲಸ ಮಾಡುತ್ತಿರುವ ಸುರೇಂದ್ರ ಅವರಿಂದ ದರೋಡೆ ನಡೆಸಿದ್ದಾರೆ.
ಸುರೇಂದ್ರ ಬಳಿ ಇದ್ದ ಹಣ, ಚಿನ್ನಾಭರಣ ಕಸಿದು ಪರಾರಿಯಾಗಿದ್ದಾರೆ.
ಮಾಲೀಕರ ಸೂಚನೆ ಮೇರೆಗೆ ಸುರೇಂದ್ರ ಚಿನ್ನ ಮತ್ತು ನಗದು ಸಮೇತ ಶಿವಮೊಗ್ಗಕ್ಕೆ ತೆರಳಿದ್ದು, ಆಭರಣ ನೀಡಿ ಚಿನ್ನದ ಬಿಸ್ಕತ್ ಪಡೆದು ಬೆಂಗಳೂರಿಗೆ ಬಂದಿದ್ದಾರೆ, ಸ್ಯಾಟಲೈಟ್ ನಿಲ್ದಾಣದಲ್ಲಿ ತಮಿಳುನಾಡಿಗೆ ತೆರಳುವ ಬಸ್ ಗೆ ಕಾದು ಕುಳಿತಿದ್ದ ಸಂದರ್ಭದಲ್ಲಿ ಪೊಲೀಸರು ಎಂದು ಹೇಳಿಕೊಂಡು ಬಂದ ಮೂವರು ಖದೀಮರು ಬ್ಯಾಗ್ ಪರಿಶೀಲಿಸಬೇಕು ಎಂದು ಬೆದರಿಸಿ ಕಾರ್ ನಲ್ಲಿ ಸ್ವಲ್ಪ ದೂರ ಕರೆದುಕೊಂಡು ಹೋಗಿದ್ದಾರೆ. ಬ್ಯಾಗ್ ನಲ್ಲಿದ್ದ 6 ಲಕ್ಷ ರೂಪಾಯಿ ನಗದು, ಚಿನ್ನದ ಬಿಸ್ಕತ್ ಕಸಿದು ಪರಾರಿಯಾಗಿದ್ದಾರೆ. ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.