ಬೆಂಗಳೂರು: ಶಾಲೆಗಳಲ್ಲಿ ಮಕ್ಕಳಿಗೆ ಮೊಟ್ಟೆ ನೀಡಲಾಗುತ್ತಿದೆ. ಮೊಟ್ಟೆ ತಿನ್ನದ ಮಕ್ಕಳಿಗೆ ಬಾಳೆಹಣ್ಣು, ಚಿಕ್ಕಿ ನೀಡಲಾಗುತ್ತಿದೆ. ಮೊಟ್ಟೆ ನೀಡಲು ಆರಂಭಿಸಿದ ನಂತರ ಶಾಲಾ ಮಕ್ಕಳಲ್ಲಿ ಪೌಷ್ಟಿಕತೆ ಹೆಚ್ಚಾಗಿದೆ. ಯಾರಿಗೂ ಮೊಟ್ಟೆ ತಿನ್ನಲು ಬಲವಂತ ಮಾಡಿಲ್ಲ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಬಿ.ಸಿ.
ನಾಗೇಶ್ ಹೇಳಿದ್ದಾರೆ.
ವಿಧಾನ ಪರಿಷತ್ ನಲ್ಲಿ ಜೆಡಿಎಸ್ ಸದಸ್ಯ ಕೆ.ಎ. ತಿಪ್ಪೇಸ್ವಾಮಿ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಶಾಲೆಗಳಲ್ಲಿ ಮತ್ತೆ ತಿನ್ನದ ಮಕ್ಕಳಿಗೆ ಬಾಳೆಹಣ್ಣು, ಚಿಕ್ಕಿ ನೀಡಲಾಗುತ್ತಿದ್ದು, ಯಾವುದನ್ನು ಸೇವಿಸಬೇಕೆಂಬುದು ಮಕ್ಕಳ ನಿರ್ಧಾರಕ್ಕೆ ಬಿಡಲಾಗಿದೆ ಎಂದು ಹೇಳಿದ್ದಾರೆ.
2017ರಿಂದಲೇ ಒಂದರಿಂದ ಎಂಟನೇ ತರಗತಿ ಮಕ್ಕಳಿಗೆ ಮೊಟ್ಟೆ ನೀಡಲು ಚರ್ಚೆ ನಡೆಯುತ್ತಿದೆ. ನಮ್ಮ ಸರ್ಕಾರ ಯಾವುದೇ ವಿರೋಧ ಬಂದರೂ ಲೆಕ್ಕಿಸದೆ ಅಪೌಷ್ಟಿಕತೆ ಕಂಡು ಬಂದ ಜಿಲ್ಲೆಗಳಲ್ಲಿ ಮೊಟ್ಟೆ ನೀಡುತ್ತಾ ಬಂದಿದೆ ಎಂದು ಹೇಳಿದ್ದಾರೆ.
1ರಿಂದ 15 ವರ್ಷದ ಶಾಲಾ ಮಕ್ಕಳಲ್ಲಿ ಅಪೌಷ್ಟಿಕತೆ, ರಕ್ತ ಹೀನತೆ, ಬಹು ಪೋಷಕಾಂಶಗಳ ಕೊರತೆ ಕಂಡು ಬಂದ ಹಿನ್ನೆಲೆಯಲ್ಲಿ 2021 -22ನೇ ಸಾಲಿನಿಂದ ಮೊಟ್ಟೆ ನೀಡುತ್ತಿದ್ದು, ಮೊಟ್ಟೆ ತಿನ್ನದ ಮಕ್ಕಳಿಗೆ ಬಾಳೆಹಣ್ಣು, ಚಿಕ್ಕಿ ನೀಡಲಾಗುತ್ತಿದೆ ಎಂದು ಹೇಳಿದ್ದಾರೆ,
ಮಕ್ಕಳಿಗೆ ಬಲವಂತವಾಗಿ ಮೊಟ್ಟೆ ಕೊಡುತ್ತಿಲ್ಲ, ಮಕ್ಕಳೇ ತಮಗೆ ಬೇಕಾದದ್ದನ್ನು ಆಯ್ಕೆ ಮಾಡಿಕೊಳ್ಳುತ್ತಾರೆ, ಶಾಲಾ ಮಕ್ಕಳಿಗೆ ಸಾತ್ವಿಕ ಆಹಾರ ನೀಡಲು ಮಠಾಧೀಶರು ಹಾಗೂ ಗಣ್ಯರು ಸಲಹೆ ನೀಡಿದ್ದಾರೆ, ಆದರೆ, ಸಾತ್ವಿಕ ಆಹಾರ ನೀಡುವ ಬಗ್ಗೆ ಸರ್ಕಾರ ಚಿಂತನೆ ನಡೆಸಿಲ್ಲ ಎಂದು ಸಚಿವರು ಹೇಳಿದ್ದಾರೆ.