Spread the love

ಟಿಪ್ಪುವನ್ನು ಹೊಡೆದುಹಾಕಿದಂತೆ ಹೊಡೆದುಹಾಕಬೇಕು ಎಂದು ಸಚಿವ ಅಶ್ವಥನಾರಾಯಣ ಹೇಳಿರುವ ವಿಚಾರ ಈಗ ವಿವಾದಕ್ಕೆ ಕಾರಣವಾಗುವಂತೆ ಕಾಣುತ್ತಿದೆ. ಇದಕ್ಕೆ ಟ್ವೀಟ್‌ ಮೂಲಕ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಟಾಂಗ್‌ ನೀಡಿದ್ದಾರೆ.

ಟಿಪ್ಪುವನ್ನು ಹೊಡೆದುಹಾಕಿದಂತೆ ನನ್ನನ್ನೂ ಹೊಡೆದುಹಾಕಬೇಕು ಎಂದು ಸಚಿವ ಅಶ್ವಥನಾರಾಯಣ ಜನರಿಗೆ ಕರೆನೀಡಿದ್ದಾರೆ.

ಜನರನ್ನು ಯಾಕೆ ಪ್ರಚೋದಿಸುತ್ತೀರಿ ಸಚಿವರೇ? ನೀವೇ ಕೋವಿ ಹಿಡಿದುಕೊಂಡು ಬಂದು ಬಿಡಿ ಎಂದು ಸರಣಿ ಟ್ವೀಟ್‌ ನಲ್ಲಿ ಸಿದ್ದರಾಮಯ್ಯ ಹೇಳಿದ್ದಾರೆ.

ನನ್ನ ಹತ್ಯೆಗೆ ಅವರು ಕೊಟ್ಟ ಕರೆಯಿಂದ ನನಗೇನು ಆಶ್ಚರ್ಯವಾಗಿಲ್ಲ. ಗಾಂಧೀಜಿಯನ್ನು ಕೊಂದವರನ್ನೇ ಆರಾಧಿಸುತ್ತಿರುವ ಪಕ್ಷದ ನಾಯಕರಿಂದ ಕೊಲೆಗಡುಕತನವಲ್ಲದೆ, ಪ್ರೀತಿ, ಕರುಣೆ, ಸ್ನೇಹವನ್ನು ನಿರೀಕ್ಷಿಸಲು ಸಾಧ್ಯವೇ? ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ರಾಜ್ಯದ ಒಬ್ಬ ಸಚಿವ ಈ ರೀತಿ ಬಹಿರಂಗವಾಗಿ ಹತ್ಯೆಗೆ ಕರೆ ನೀಡಿದ ನಂತರವೂ ಅವರ ವಿರುದ್ಧ ಪೊಲೀಸರು ಕ್ರಮಕೈಗೊಂಡಿಲ್ಲ ಎಂದಾದರೆ ಈ ರಾಜ್ಯವನ್ನು ಆಳುವವರು ಜೀವಂತವಾಗಿಲ್ಲ, ಸರ್ಕಾರ ಸತ್ತುಹೋಗಿದೆ ಎಂದೇ ಲೆಕ್ಕ. ಸಚಿವ ಅಶ್ವಥನಾರಾಯಣ ಅವರು ನೀಡಿರುವ ಹತ್ಯೆಯ ಕರೆಯ ಬಗ್ಗೆ ಮುಖ್ಯಮಂತ್ರಿ ಬೊಮ್ಮಾಯಿ ಮತ್ತು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಪ್ರತಿಕ್ರಿಯೆ ಏನು ಎನ್ನುವುದನ್ನು ನಾನು ತಿಳಿದುಕೊಳ್ಳಬಯಸುತ್ತೇನೆ. ಮೌನ ಸಮ್ಮತಿಯ ಲಕ್ಷಣವೇ? ಎಂದು ಸಿದ್ದರಾಮಯ್ಯ ಕೇಳಿದ್ದಾರೆ.


Spread the love

By admin