ಈ ಹಿಂದಿನ ಬಿಜೆಪಿ ಸರ್ಕಾರ ಶಾಲಾ ಪಠ್ಯದಲ್ಲಿ ಸೇರಿಸಿದ್ದ ಆರ್ಎಸ್ಎಸ್ ಮುಖಂಡ ಹೆಡಗೇವಾರ್, ಹಿಂದೂ ಮಹಾಸಭಾ ಮುಖಂಡ ವಿ.ಡಿ ಸಾವರ್ಕರ್ ಹಾಗೂ ಸೂಲಿಬೆಲೆ ಚಕ್ರವರ್ತಿಯವರ ಪಠ್ಯವನ್ನು ಕೈಬಿಡಲು ಸಚಿವ ಸಂಪುಟದಲ್ಲಿ ತೀರ್ಮಾನ ಮಾಡಲಾಗಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದರು.
ಸಚಿವ ಸಂಪುಟ ಸಭೆ ಬಳಿಕ ವಿಧಾನಸೌಧದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪಠ್ಯ ಪರಿಷ್ಕರಣೆ ವಿಷಯದಲ್ಲಿ ಸಿಎಂ ಸಿದ್ದರಾಮಯ್ಯ ನವರು ನಿರಂತರ ಮಾರ್ಗ ದರ್ಶನ ಮಾಡುತ್ತಿದ್ದಾರೆ. ಈಗಾಗಲೇ ಪಠ್ಯ ಶಾಲೆಗಳಿಗೆ ಹೋಗಿದೆ. ಮತ್ತೆ ಪ್ರಿಂಟ್ ಮಾಡಿ ಕಳಿಸುವುದು ಕಷ್ಟ. ಆದರೆ ಸಪ್ಲಿಮೆಂಟರಿ ಪರಿಷ್ಕರಣೆ ಮಾಡಲು ಅವಕಾಶವಿದೆ. ಯಾವುದು ಉಳಿಸಿಕೊಳ್ಳುವುದು ಎಂದು ನಿರ್ಧರಿಸಬಹುದು ಎಂದರು.
ರಾಜಪ್ಪ ದಳವಾಯಿ, ಪ್ರೊ.ಚಂದ್ರಶೇಖರ್, ರಾಜೇಶ್, ಅಶ್ವತ್ಥನಾರಾಯಣ ಅವರ ಸಮಿತಿಯು 45 ಬದಲಾವಣೆಗಳನ್ನು ಮಾಡಲು ಸಲಹೆ ನೀಡಿತ್ತು. ಪ್ಯಾರಾಗ್ರಾಫ್, ಪದಗಳನ್ನು ಬದಲಿಸಲು ಕೋರಿಕೆ ಇಡಲಾಗಿತ್ತು ಎಂದು ಅವರು ಹೇಳಿದರು.
ಆರರಿಂದ ಹತ್ತನೇ ( 6 – 10 ) ತರಗತಿವರೆಗಿನ ಕನ್ನಡ, ಸಮಾಜ ಪಠ್ಯ ಪುಸ್ತಕದಲ್ಲಿ ಬದಲಾವಣೆಗಳನ್ನು ಮಾಡಲಾಗುತ್ತಿದೆ. ಅಕ್ಷರಧಾತೆ ಸಾವಿತ್ರಿ ಫುಲೆ, ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ್ ಅವರ ‘ನೀ ಹೋದ ಮರುದಿನ’ ಕವನ, ಹಾಗೂ ಭಾರತದ ಮೊದಲ ಪ್ರಧಾನ ಮಂತ್ರಿಯಾದ ಜವಾಹರ್ ಲಾಲ್ ನೆಹರು ರವರಿಗೆ ಸಂಬಂಧಪಟ್ಟಂತಹ ‘ ಮಗಳಿಗೆ ಬರೆದ ಪತ್ರ ‘ ಪಠ್ಯಗಳನ್ನು ಸೇರಿಸಲಾಗಿದ್ದು. ಹೆಡಗೇವಾರ್ , ವಿ.ಡಿ ಸಾವರ್ಕರ್ ಮತ್ತು ಸೂಲಿಬೆಲೆ ಚಕ್ರವರ್ತಿ ಪಾಠಗಳನ್ನು ತೆಗೆಯಲಾಗಿದೆ ಎಂದು ಮಾಹಿತಿ ನೀಡಿದರು.
ಮಕ್ಕಳಿಗೆ ಭೋದನೆಯ ಸಂದರ್ಭದಲ್ಲಿ ಯಾವುದು ಹೇಳಿಕೊಡಬೇಕು, ಯಾವುದು ಹೇಳಿಕೊಡಬಾರದೆಂದು ಶಿಕ್ಷಕರಿಗೆ ತಿಳಿಸಲಾಗುತ್ತದೆ. ಅಂದಾಜು 15 ಪುಟಗಳ ಪುಸ್ತಕ ಇರಲಿದೆ ಎಂದು ಅವರು ಹೇಳಿದರು.
ಮಕ್ಕಳ ಹಿತದೃಷ್ಟಿಯಿಂದ ಈ ತೀರ್ಮಾನ ಕೈಗೊಳ್ಳಲಾಗಿದೆ. ಹಿಂದಿನ ಬಿಜೆಪಿ ಸರ್ಕಾರ ದೊಡ್ಡ ಬದಲಾವಣೆ ತರಲು ಹೊರಟಿತ್ತು, ಆಕ್ಷೇಪಕ್ಕೆ ಹೆದರಿ ಕೈ ಬಿಟ್ಟಿತ್ತು ಎಂದು ಅವರು ಹೇಳಿದರು.