ಬಾಲಿವುಡ್ ನಟಿ ಬಿಪಾಶಾ ಬಸು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಅಚ್ಚರಿಯೆಂದರೆ ಮಗು ಹುಟ್ಟಿದ ಒಂದೇ ಗಂಟೆಯಲ್ಲಿ ತಮ್ಮ ಮಗುವಿಗೆ ಮುದ್ದಾದ ಹೆಸರಿಟ್ಟಿದ್ದಾರೆ. ತಾವು ದೇವಿಯ ಆರಾಧಕರಾಗಿರುವ ಕಾರಣ ಮಗುವಿಗೆ ಅವರು ‘ದೇವಿ’ ಎಂದು ಹೆಸರಿಟ್ಟಿದ್ದಾರೆ. ತಮ್ಮ ಮನೆಗೆ ದೇವಿಯನ್ನು ಬರಮಾಡಿಕೊಂಡಿರುವುದಾಗಿ ಅವರು ಸೋಷಿಯಲ್ ಮೀಡಿಯಾ ಮೂಲಕ ಅಭಿಮಾನಿಗಳಿಗೆ ತಿಳಿಸಿದ್ದಾರೆ.
ಬಿಪಾಶಾ ಬಸು ತಾಯಿ ಆಗುವ ಮೂಲಕ ಹೊಸ ಜವಾಬ್ದಾರಿಯತ್ತ ಹೊರಳಿದ್ದು, ಹಲವು ದಿನಗಳಿಂದ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದ ನಟಿ, ನಾಲ್ಕೈದು ಬಾರಿ ಬೇಬಿ ಬಂಪ್ ಫೋಟೋಶೂಟ್ ಮಾಡಿಸಿಕೊಂಡು ಸಂಭ್ರಮಿಸಿದ್ದರು. ಅವುಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡು, ಮೊದಲ ಮಗುವಿನ ಆಗಮನಕ್ಕೆ ಕಾಯುತ್ತಿದ್ದೇನೆ ಎಂದೂ ಬರೆದುಕೊಂಡಿದ್ದರು.
ಬಿಪಾಶಾ ಬಸು ಮತ್ತು ಕರಣ್ ಸಿಂಗ್ ಗ್ರೋವರ್ ದಂಪತಿ ಆಗಾಗ್ಗೆ ಖಾಸಗಿ ಜೀವನದ ಸಂಗತಿಗಳನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ. ಅದರಲ್ಲೂ ಮೊದಲ ಮಗುವಿನ ಕುರಿತು ಸಾಕಷ್ಟು ಕನಸುಗಳನ್ನು ಈಗಾಗಲೇ ಹಂಚಿಕೊಂಡಿದ್ದಾರೆ. ಮಗು ಹಾರೈಕೆ, ಮಗುವಿನ ಲಾಲನೆ, ಪಾಲನೆ ಸೇರಿದಂತೆ ಹಲವು ಟಿಪ್ಸ್ ಗಳನ್ನು ಹಿರಿಯರಿಂದ ಪಡೆದುಕೊಳ್ಳುವ ಕುರಿತು ಹೇಳಿಕೊಂಡಿದ್ದರು. 30 ಏಪ್ರಿಲ್ 2016ರಲ್ಲಿ ಮದುವೆಯಾಗಿರುವ ಬಿಪಾಶಾ ಇದೇ ಆಗಸ್ಟ್ ನಲ್ಲಿ ತಾವು ಗರ್ಭಿಣಿಯಾಗಿರುವ ಸಂಗತಿಯನ್ನ ತಿಳಿಸಿದ್ದರು.
ಬಿಪಾಶಾಗೆ ಮಗುವಾಗುತ್ತಿದ್ದಂತೆಯೇ ಅವರ ಆಪ್ತರು, ಸ್ನೇಹಿತರು ಹಾಗೂ ಸಂಬಂಧಿಕರು ಶುಭಾಶಯಗಳನ್ನು ಕೋರುತ್ತಿದ್ದಾರೆ. ಬಿಪಾಶಾ ಇಷ್ಟಪಟ್ಟಂತೆ ಅವರಿಗೆ ಹೆಣ್ಣು ಮಗುವೇ ಆಗಿದೆ ಎಂದು ಹಲವರು ಸಂಭ್ರಮಿಸಿದ್ದಾರೆ. ತಾಯಿ ಮತ್ತು ಮಗು ಆರೋಗ್ಯವಾಗಿದ್ದಾರೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಸದ್ಯದಲ್ಲೇ ಮಗುವಿನೊಂದಿಗೆ ಬಿಪಾಶಾ ಮನೆಗೂ ಬರಲಿದ್ದಾರೆ.