ಇಂಡಿಯನ್ ಪ್ರೀಮಿಯರ್ ಲೀಗ್ 2022 ರಲ್ಲಿ ತೀರಾ ಕಳಪೆ ಪ್ರದರ್ಶನ ತೋರಿದ ಮುಂಬೈ ಇಂಡಿಯನ್ಸ್ ಇದೀಗ ಐಪಿಎಲ್ 2023 ಕ್ಕಾಗಿ ಭರ್ಜರಿ ತಯಾರಿ ನಡೆಸುತ್ತಿದೆ. ಇದರ ಮೊದಲ ಹೆಜ್ಜೆಯಾಗಿ ಫಾರ್ಮ್ನಲ್ಲಿದ್ದ ಆಟಗಾರರನ್ನು ತನ್ನ ತಂಡದಿಂದ ಬಿಡುಗಡೆ ಮಾಡುತ್ತಿದೆ. ಈ ಸಾಲಿನಲ್ಲಿ ವೆಸ್ಟ್ ಇಂಡೀಸ್ ದಿಗ್ಗಜ ಆಟಗಾರ ಕೈರೊನ್ ಪೊಲಾರ್ಡ್ ಕೂಡ ಇದ್ದಾರೆ. 2010ರಲ್ಲಿ ಮುಂಬೈ ತಂಡದ ಪರವೇ ಐಪಿಎಲ್ ಟೂರ್ನಿಗೆ ಪದಾರ್ಪಣೆ ಮಾಡಿದ್ದ ಪೊಲಾರ್ಡ್ ಅವರನ್ನು ಇದೀಗ ಫ್ರಾಂಚೈಸಿ ಕೈಬಿಟ್ಟಿದೆ. ಇದರ ಬೆನ್ನಲ್ಲೇ ಪೊಲಾರ್ಡ್ ಮಹತ್ವದ ಘೋಷಣೆ ಮಾಡಿದ್ದಾರೆ. ಯಾವುದೇ ಮುನ್ಸೂಚನೆ ನೀಡದೆ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಗೆ ದಿಢೀರ್ ವಿದಾಯ ಘೋಷಿಸಿದ್ದಾರೆ.
ಇನ್ನುಮುಂದೆ ಐಪಿಎಲ್ನಲ್ಲಿ ನಾನು ಕಣಕ್ಕಿಳಿಯುವುದಿಲ್ಲ ಎಂದಿರುವ ಪೊಲಾರ್ಡ್ ಕೇವಲ ಮುಂಬೈ ತಂಡದ ಬ್ಯಾಟಿಂಗ್ ಕೋಚ್ ಆಗಿ ಕಾರ್ಯನಿರ್ವಹಿಸುತ್ತೇನೆ ಎಂದು ಹೇಳಿಕೊಂಡಿದ್ದಾರೆ. ”ನಾನು ತೆಗೆದುಕೊಂಡಿರುವುದು ಸುಲಭವಾದ ನಿರ್ಧಾರವಲ್ಲ, ಆದರೆ ತುಂಬಾ ಸಾಧಿಸಿದ ಈ ಅದ್ಭುತ ಫ್ರ್ಯಾಂಚೈಸಿಯಲ್ಲಿ ಬದಲಾವಣೆಯ ಅಗತ್ಯವಿದೆ ಎಂದು ನಾನು ಅರ್ಥಮಾಡಿಕೊಂಡಿದ್ದೇನೆ. ಇನ್ನು ಮುಂದೆ ಮುಂಬೈಗಾಗಿ ನಾನು ಆಡಲು ಆಗದಿದ್ದರೆ ನಾನು ನಾನು ಅವರ ವಿರುದ್ಧವೂ ಆಡುವುದನ್ನು ನೋಡಲು ಸಾಧ್ಯವಿಲ್ಲ. ನಾನು ಮುಂಬೈ ಇಂಡಿಯನ್ಸ್ ತಂಡದವನೇ ಆಗಿರುತ್ತೇನೆ,” ಎಂದು ಪೊಲಾರ್ಡ್ ಬರೆದುಕೊಂಡಿದ್ದಾರೆ.