Spread the love

ಕಳೆದ ಕೆಲ ವರ್ಷಗಳಿಂದ ಪ್ರತಿ ಸೀಮಿತ ಓವರ್‌ ಸರಣಿಯನ್ನು ಮುಂಬರುವ ಐಸಿಸಿ ಜಾಗತಿಕ ಮಟ್ಟದ ಟೂರ್ನಿಗೆ ಸಿದ್ಧತೆ ಎಂದೇ ಪರಿಗಣಿಸಲಾಗುತ್ತಿದೆ. ಈಗ ಟಿ20 ವಿಶ್ವಕಪ್‌ ಮುಕ್ತಾಯಗೊಂಡಿದ್ದು, 2024ರಲ್ಲಿ ನಡೆಯುವ ಮುಂದಿನ ಟಿ20 ವಿಶ್ವಕಪ್‌ನತ್ತ ಎಲ್ಲರ ಚಿತ್ತ ನೆಟ್ಟಿದೆ. ಈ ನಡುವೆ 2023ರ ಏಕದಿನ ವಿಶ್ವಕಪ್‌ಗೂ ತಂಡಗಳು ಸಿದ್ಧತೆ ನಡೆಸಲಿವೆ. ಕಳೆದ ವಾರ ಮುಕ್ತಾಯಗೊಂಡ ಟಿ20 ವಿಶ್ವಕಪ್‌ನ ಸೆಮಿಫೈನಲ್‌ನಲ್ಲಿ ಮುಗ್ಗರಿಸಿದ ಭಾರತ ಹಾಗೂ ನ್ಯೂಜಿಲೆಂಡ್‌ ತಂಡಗಳು 3 ಪಂದ್ಯಗಳ ಟಿ20 ಸರಣಿಯಲ್ಲಿ ಮುಖಾಮುಖಿಯಾಗಲಿದ್ದು, ಮೊದಲ ಪಂದ್ಯ ಶುಕ್ರವಾರ ಇಲ್ಲಿನ ಬೇಸಿನ್‌ ರಿಸರ್ವ್ ಕ್ರೀಡಾಂಗಣದಲ್ಲಿ ನಡೆಯಲಿದೆ.

ಭಾರತ ತಂಡದ ಆಟದ ಶೈಲಿ ಹಾಗೂ ಆಟಗಾರರ ವೈಯಕ್ತಿಕ ಪ್ರದರ್ಶನಗಳ ಬಗ್ಗೆ ಕುತೂಹಲವಿದೆ. ಹಿರಿಯ ಆಟಗಾರರಾದ ರೋಹಿತ್‌ ಶರ್ಮಾ, ವಿರಾಟ್ ಕೊಹ್ಲಿ, ರವಿಚಂದ್ರನ್ ಅಶ್ವಿನ್‌, ಕೆ ಎಲ್ ರಾಹುಲ್‌, ದಿನೇಶ್ ಕಾರ್ತಿಕ್‌ ವಿಶ್ರಾಂತಿ ಪಡೆದಿರುವ ಕಾರಣ ಯುವ ಆಟಗಾರರಿಗೆ ಆಯ್ಕೆ ಸಮಿತಿ ಗಮನ ಸೆಳೆಯಲು ಇದು ಉತ್ತಮ ಅವಕಾಶ. ಭಾರತ ಟಿ20 ಕ್ರಿಕೆಟ್‌ನ ಭವಿಷ್ಯ ತಜ್ಞ ಆಟಗಾರರು ಹಾಗೂ ಆಕ್ರಮಣಕಾರಿ ಆಟದ ಮೇಲೆ ಅವಲಂಬಿತವಾಗಿದೆ ಎಂದು ಹಂಗಾಮಿ ಕೋಚ್‌ ವಿವಿಎಸ್‌ ಲಕ್ಷ್ಮಣ್‌ ಹೇಳಿದ್ದಾರೆ. ಈ ಸರಣಿಯಲ್ಲಿ ಭಾರತ ತಂಡದ ಆಡಳಿತ ಆಯ್ಕೆ ಮಾಡುವ ಆಟಗಾರರು ಹಾಗೂ ಆ ಆಟಗಾರರ ಆಟದ ಶೈಲಿ ಮೇಲೆ ಎಲ್ಲರ ಕಣ್ಣಿದೆ.

ಭಾರತ ತಂಡ ಈ ಸರಣಿಯಲ್ಲಿ ಹೊಸ ಆರಂಭಿಕ ಜೋಡಿಯೊಂದಿಗೆ ಕಣಕ್ಕಿಳಿಯಲಿದೆ. ಆರಂಭಿಕರಾಗಿ ಇಶಾನ್‌ ಕಿಶನ್‌, ಶುಭ್‌ಮನ್‌ ಗಿಲ್‌ ಆಡುವ ಸಾಧ್ಯತೆ ಇದೆಯಾದರೂ, ರಿಷಭ್‌ ಪಂತ್‌ರನ್ನು ಇನ್ನಿಂಗ್‌್ಸ ಆರಂಭಿಸುವಂತೆ ಕೇಳಬಹುದು ಎನ್ನುವ ಚರ್ಚೆಯೂ ನಡೆಯುತ್ತಿದೆ. 3ನೇ ಕ್ರಮಾಂಕಕ್ಕೆ ಸಂಜು ಸ್ಯಾಮ್ಸನ್‌, ಶ್ರೇಯಸ್‌ ಅಯ್ಯರ್‌ ಹಾಗೂ ದೀಪಕ್‌ ಹೂಡಾ ನಡುವೆ ಸ್ಪರ್ಧೆ ಏರ್ಪಡಬಹುದು. ವಿಶ್ವಕಪ್‌ ಪಂದ್ಯಗಳನ್ನು ಡಗೌಟ್‌ನಲ್ಲಿ ಕೂತು ವೀಕ್ಷಿಸಿದ ಯಜುವೇಂದ್ರ ಚಹಲ್‌ಗೆ ಅವಕಾಶ ಸಿಗುವುದು ಬಹುತೇಕ ಖಚಿತ.


Spread the love