Spread the love

ಸಾಲದ ಮೇಲಿನ ಕನಿಷ್ಠ ಬಡ್ಡಿ ದರ ಅಥವಾ ಮಾರ್ಜಿನಲ್ ಕಾಸ್ಟ್ ಆಫ್ ಲೆಂಡಿಂಗ್ ರೇಟ್ ಅನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ  ಶೇಕಡಾ 10ರಿಂದ 15ರಷ್ಟು ಹೆಚ್ಚಿಸಿದೆ. ಪರಿಷ್ಕೃತ ದರ ನವೆಂಬರ್ 15 ಜಾರಿಗೆ ಬಂದಿದ್ದು, ಎಂಸಿಎಲ್​ಆರ್ ಜತೆ ಲಿಂಕ್ ಆಗಿರುವ ಸಾಲದ ಇಎಂಐ ಮೊತ್ತ ಹೆಚ್ಚಾಗಲಿದೆ. ಒಂದು ತಿಂಗಳ ಮತ್ತು ಮೂರು ತಿಂಗಳ ಎಂಸಿಎಲ್​ಆರ್ ದರವನ್ನು ಶೇಕಡಾ 7.60ರಿಂದ 7.75ಕ್ಕೆ ಹೆಚ್ಚಿಸಲಾಗಿದೆ. ಆರು ತಿಂಗಳುಗಳಿಂದ 1 ವರ್ಷದ ವರೆಗಿನ ಎಂಸಿಎಲ್​ಆರ್ ದರವನ್ನು ಶೇಕಡಾ 7.90ರಿಂದ 8.05ಕ್ಕೆ ಹೆಚ್ಚಳ ಮಾಡಲಾಗಿದೆ. ಮೂರು ವರ್ಷಗಳವರೆಗಿನ ಎಂಸಿಎಲ್​ಆರ್ ದರವನ್ನು ಶೇಕಡಾ 8.25ರಿಂದ 8.35ಕ್ಕೆ ಏರಿಕೆ ಮಾಡಲಾಗಿದೆ.

ಎಂಸಿಎಲ್ಆರ್ ಎಂದರೇನು?

ಮಾರ್ಜಿನಲ್ ಕಾಸ್ಟ್ ಆಫ್ ಲೆಂಡಿಂಗ್ ರೇಟ್ ಅಥವಾ ಎಂಸಿಎಲ್​ಆರ್ ಎಂದರೆ ಬ್ಯಾಂಕ್​ಗಳು ಗ್ರಾಹಕರಿಗೆ ನೀಡುವ ಕನಿಷ್ಠ ಬಡ್ಡಿ ದರದ ಆಫರ್. ವಿವಿಧ ರೀತಿಯ ಸಾಲಗಳ ಮೇಲಿನ ಬಡ್ಡಿದರಗಳನ್ನು ನಿರ್ಧರಿಸಲು 2016ರಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ (ಆರ್​ಬಿಐ) ಇದನ್ನು ಪರಿಚಯಿಸಿತ್ತು. ಇನ್ನೂ ಸರಳವಾಗಿ, ಬ್ಯಾಂಕ್​ಗಳು ಸಾಲ ನೀಡಲು ಅನುಸರಿಸುವ ಬಡ್ಡಿಯ ಮಾನದಂಡ ಎಂಸಿಎಲ್​ಆರ್ ಎನ್ನಬಹುದು. ಈ ವಿಧಾನದಲ್ಲಿ ಸಾಲದ ಮೇಲಿನ ಬಡ್ಡಿಯ ಕನಿಷ್ಠ ದರವೊಂದನ್ನು ನಿಗದಿಪಡಿಸಿರಲಾಗುತ್ತದೆ. ಇದಕ್ಕಿಂತ ಕಡಿಮೆ ಬಡ್ಡಿ ದರದಲ್ಲಿ ಬ್ಯಾಂಕ್​ಗಳು ಸಾಲ ನೀಡುವುದಿಲ್ಲ.

ಎಂಸಿಎಲ್ಆರ್ ಬದಲಾದರೆ

ಎಂಸಿಎಲ್​ಆರ್ ಅಥವಾ ಕನಿಷ್ಠ ಬಡ್ಡಿ ದರದಲ್ಲಿ ಬದಲಾವಣೆ ಆದರೆ ಸಾಲದ ಮೇಲೂ ಅದು ಪರಿಣಾಮ ಬೀರುತ್ತದೆ. ಬಡ್ಡಿ ದರ ಹೆಚ್ಚಾದರೆ ಸಾಲದ ಇಎಂಐ ಮೊತ್ತವೂ ಹೆಚ್ಚಾಗಿಯೇ ಆಗುತ್ತದೆ. ಈಗಾಗಲೇ ಕನಿಷ್ಠ ಬಡ್ಡಿ ದರದಲ್ಲಿ ಸಾಲ ಪಡೆದವರಾದರೆ ಮರುಪಾವತಿಯ ದಿನಾಂಕ ಬಂದ ಕೂಡಲೇ ಬಡ್ಡಿ ದರದ ವ್ಯತ್ಯಾಸ ಗಮನಕ್ಕೆ ಬರಲಿದೆ. ಕನಿಷ್ಠ ಬಡ್ಡಿ ದರದಲ್ಲಿ ಹೊಸ ಸಾಲ ಪಡೆಯುವವರಾದರೆ ಆರಂಭದಿಂದಲೇ ಹೆಚ್ಚಿನ ಇಎಂಐ ಪಾವತಿಸಬೇಕಾಗುತ್ತದೆ.

ಆರ್​ಬಿಐ ರೆಪೊ ದರಕ್ಕೆ ಅನುಗುಣವಾಗಿ ಬ್ಯಾಂಕ್​ಗಳು ಬಡ್ಡಿ ದರದಲ್ಲಿಯೂ ಪರಿಷ್ಕರಣೆ ಮಾಡುತ್ತವೆ. ಹೆಚ್ಚುತ್ತಿರುವ ಹಣದುಬ್ಬರ ನಿಯಂತ್ರಿಸಲು ಆರ್​ಬಿಐ ಮೇ ನಂತರ ಈವರೆಗೆ ರೆಪೊ ದರವನ್ನು 190 ಮೂಲಾಂಶದಷ್ಟು ಹೆಚ್ಚಳ ಮಾಡಿದ್ದು ಶೇಕಡಾ 5.90ಕ್ಕೆ ನಿಗದಿಪಡಿಸಿದೆ. ಇದರ ಬೆನ್ನಲ್ಲೇ ಎಸ್​ಬಿಐ ಸೇರಿದಂತೆ ಹೆಚ್ಚಿನ ಬ್ಯಾಂಕ್​ಗಳು ಬಡ್ಡಿ ದರ ಹೆಚ್ಚಳ ಮಾಡಿವೆ. ಸ್ಥಿರ ಠೇವಣಿ, ಆರ್​ಡಿ ಸೇರಿದಂತೆ ವಿವಿಧ ಠೇವಣಿಗಳ ಬಡ್ಡಿ ದರ ಹೆಚ್ಚಾಗಿದೆ. ಅದೇ ರೀತಿ ಸಾಲದ ಮೇಲಿನ ಬಡ್ಡಿ ದರವನ್ನೂ ಹೆಚ್ಚಿಸಿವೆ. ಇದೀಗ ಎಸ್​ಬಿಐ ಸಾಲದ ಮೇಲಿನ ಕನಿಷ್ಠ ಬಡ್ಡಿ ದರವನ್ನೂ ಹೆಚ್ಚಿಸಿದೆ.

 


Spread the love