ಸಾವು ಯಾವಾಗ ಹೇಗೆ ಬೇಕಾದರೂ ಸಂಭವಿಸಬಹುದು. ಇದೀಗ ಅಂತಹದ್ದೇ ಒಂದು ಘಟನೆ ಕೊಲಂಬಿಯಾದಲ್ಲಿ ನಡೆದಿದ್ದು, ಕೊಲಂಬಿ ಯಾದ 22 ವರ್ಷದ ಪ್ರತಿಭಾನ್ವಿತ ಫುಟ್ಬಾಲಿಗ ಆಂಡ್ರೆಸ್ ಬಲಾಂಟ ಅಭ್ಯಾಸ ನಡೆಸುತ್ತಿರುವಾಗಲೇ ಕುಸಿದುಬಿದ್ದು ಹೃದಯಸ್ತಂಭ ನದಿಂದ ಕೊನೆಯುಸಿರೆಳೆದಿದ್ದಾರೆ. ಇದೀಗ ಆಂಡ್ರೆಸ್ ಬಲಾಂಟ ಅವರ ನಿಧನಕ್ಕೆ ಇಡೀ ಫುಟ್ಬಾಲ್ ಜಗತ್ತು ಕಂಬನಿ ಮಿಡಿದಿದೆ.
‘ದ ಸನ್’ ವರದಿಯ ಪ್ರಕಾರ ಆಂಡ್ರೆಸ್ ಬಲಾಂಟ, ಕಳೆದ ಕೆಲ ತಿಂಗಳುಗಳಿಂದ ಅರ್ಜೆಂಟೀನಾ ಪರ್ಸ್ಟ್ ಡಿವಿಷನ್, ಅಥ್ಲೆಟಿಕೊ ಟುಕುಮನ್ ಪರ ಆಡುತ್ತಿದ್ದರು. ಇದೀಗ ಈ ವಿಚಾರವನ್ನು ಅಥ್ಲೆಟಿಕೊ ಟುಕುಮನ್ ಖಚಿತಪಡಿಸಿದೆ. ‘ಕೊಲಂಬಿಯಾದ ಫುಟ್ಬಾಲಿಗ ಆಂಡ್ರೆಸ್ ಬಲಾಂಟ ಅವರು ನಿಧನರಾದರು ಎಂದು ತಿಳಿಸಲು ವಿಷಾಧಿಸುತ್ತೇವೆ. ಈ ಸಂಕಷ್ಟದ ಸಮಯದಲ್ಲಿ ಈ ದುಃಖ ಭರಿಸುವ ಶಕ್ತಿ ಅವರ ಕುಟುಂಬ ಹಾಗೂ ಸ್ನೇಹಿತರಿಗೆ ಸಿಗಲಿ ಎಂದು ಪ್ರಾರ್ಥಿಸುತ್ತೇವೆ ಎಂದು ಅಥ್ಲೆಟಿಕೊ ಟುಕುಮನ್ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ತಿಳಿಸಿದೆ.
ಕೆಲವು ಆಪ್ತ ಮೂಲಗಳ ಪ್ರಕಾರ, 22 ವರ್ಷದ ಆಂಡ್ರೆಸ್ ಬಲಾಂಟ ಅಭ್ಯಾಸ ನಡೆಸುತ್ತಿರುವಾಗಲೇ ದಿಢೀರ್ ಕುಸಿದು ಬಿದ್ದಿದ್ದಾರೆ. ಇದರ ಬೆನ್ನಲ್ಲೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ಆಸ್ಪತ್ರೆಯಲ್ಲೂ 40 ನಿಮಿಷ ಚಿಕಿತ್ಸೆ ನೀಡಲಾಯಿತಾದರೂ, ಅವರ ಹೃದಯ ಸ್ಪಂದಿಸಲಿಲ್ಲ. ಈ ಮೊದಲು 2019ರಲ್ಲಿಯೂ ಸಹಾ ಆಂಡ್ರೆಸ್ ಬಲಾಂಟ ಒಮ್ಮೆ ಪ್ರಜ್ಞಾಹೀನರಾಗಿ ಬಿದ್ದಿದ್ದರು. ಆಗಲು ಸಹಾ ಅವರು ವೈದ್ಯಕೀಯ ತಪಾಸಣೆಗೊಳಗಾಗಿದ್ದರು.